ಬೆಂಗಳೂರು, ಅ. 31: ನಗರದ ಕಾನ್ರಾಡ್ ಪಂಚತಾರಾ ಹೋಟೆಲ್ನ ಈಜುಕೊಳದಲ್ಲಿ ವಿದ್ಯುತ್ ಆಘಾತದಿಂದ ಜರ್ಮನಿ ಮತ್ತು ಸ್ಲೋವಾಕಿಯಾ ದೇಶಗಳ ಇಬ್ಬರು ಪ್ರಜೆಗಳು ಮೃತಪಟ್ಟಿದ್ದು, ರಕ್ಷಣೆಗೆ ಮುಂದಾದ ಅಮೆರಿಕ ಪ್ರಜೆ ಹಾಗೂ ಹೋಟೆಲ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಮೃತರನ್ನು ಜರ್ಮನಿಯ ಅಲೆಕ್ಸಾಂಡರ್ ಮ್ಯಾಕ್ಸಿಮಿಲಿಯನ್ ಥೈಸ್ (57) ಹಾಗೂ ಸ್ಲೋವಾಕಿಯಾದ ಜುರಾಜ್ ಹೊರ್ವಾತ್ (45) ಎಂದು ಗುರುತಿಸಲಾಗಿದೆ. ಅಲೆಕ್ಸಾಂಡರ್ ಲುಫ್ತಾನ್ಸಾ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯಾಗಿದ್ದು, ಜುರಾಜ್ ಐಬಿಎಂ ಕಂಪನಿಯಲ್ಲಿ ಯೋಜನಾ ವ್ಯವಸ್ಥಾಪಕರಾಗಿದ್ದರು.
ಶುಕ್ರವಾರ ಸಂಜೆ ಸುಮಾರು 5.10ಕ್ಕೆ ಹೋಟೆಲ್ನ ಮೂರನೇ ಮಹಡಿಯ ಈಜುಕೊಳದಲ್ಲಿ ಘಟನೆ ಸಂಭವಿಸಿದೆ. ಇಬ್ಬರೂ ಈಜುತ್ತಿದ್ದಾಗ ವಿದ್ಯುತ್ ಆಘಾತಕ್ಕೆ ಒಳಗಾಗಿ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ಅವರನ್ನು ರಕ್ಷಿಸಲು ಧಾವಿಸಿದ ಅಮೆರಿಕ ಪ್ರಜೆ ಹಾಗೂ 26 ವರ್ಷದ ಹೋಟೆಲ್ ಸಿಬ್ಬಂದಿಗೂ ವಿದ್ಯುತ್ ಆಘಾತವಾಗಿದೆ.
ನಾಲ್ವರನ್ನು ಮಣಿಪಾಲ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲೆಕ್ಸಾಂಡರ್ ಆಸ್ಪತ್ರೆಗೆ ತರುವಷ್ಟರಲ್ಲಿ ಮೃತಪಟ್ಟಿದ್ದರು. ಜುರಾಜ್ ಅವರಿಗೆ ತುರ್ತು ಚಿಕಿತ್ಸೆ ನೀಡಿದರೂ ಬದುಕುಳಿಯಲಿಲ್ಲ ಎಂದು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ. ಮೇಬಲ್ ತಿಳಿಸಿದ್ದಾರೆ. ಗಾಯಗೊಂಡ ಇಬ್ಬರ ಆರೋಗ್ಯ ಸ್ಥಿರವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಮೃತ ಅಲೆಕ್ಸಾಂಡರ್ ಅವರ ಪತ್ನಿ ಸಿಲ್ವಿಯಾ ಒಟ್ಟಾವಾ ಪೊಲೀಸರಿಗೆ ದೂರು ನೀಡಿದ್ದು, ಈಜುಕೊಳದ ನಿರ್ವಹಣೆಯಲ್ಲಿ ಹೋಟೆಲ್ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಸಾವು ಸಂಭವಿಸಿದೆ ಎಂದು ಆರೋಪಿಸಿದ್ದಾರೆ.
ಘಟನೆಯ ಬೆನ್ನಲ್ಲೇ ಅಕ್ಟೋಬರ್ 31ರಿಂದ ನವೆಂಬರ್ 30ರವರೆಗೆ ಈಜುಕೊಳವನ್ನು ನಿರ್ವಹಣಾ ಕಾರ್ಯಕ್ಕಾಗಿ ಮುಚ್ಚಲಾಗಿದೆ ಎಂದು ಹೋಟೆಲ್ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.
ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಕಾನ್ರಾಡ್ ಹೋಟೆಲ್ ಆಡಳಿತ ಮಂಡಳಿ, ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದೆ. ಈಜುಕೊಳದಲ್ಲಿ ವಿದ್ಯುತ್ ಪ್ರವಾಹ ಉಂಟಾಗಲು ಕಾರಣವೇನು ಹಾಗೂ ಸುರಕ್ಷತಾ ವ್ಯವಸ್ಥೆಯಲ್ಲಿ ಲೋಪವಾಗಿತ್ತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.