ಬೆಳಗಾವಿ, ಅ. 30: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಸಮೀಪ ಶುಕ್ರವಾರ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮದ ನಿವಾಸಿ, ಬೆಂಗಳೂರು ಸಿಸಿಬಿ ಪೊಲೀಸ್ ಇನ್‌ಸ್ಪೆಕ್ಟರ್ ಅರುಣ ಸಾಳುಂಕೆ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತರಲ್ಲಿ ಐವರು ಬೆಂಗಳೂರು ಮೂಲದ ಪ್ರಯಾಣಿಕರು ಹಾಗೂ ಒಬ್ಬ ಪೈಲಟ್ ಸೇರಿದ್ದಾರೆ.
ಬದರಿನಾಥ ಧಾಮದ ದರ್ಶನ ಮುಗಿಸಿಕೊಂಡು ಡೆಹ್ರಾಡೂನ್‌ಗೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಮಧ್ಯಾಹ್ನ 1.14ರ ಸುಮಾರಿಗೆ ಬದರಿನಾಥದಿಂದ ಹೊರಟಿತ್ತು. ಡೆಹ್ರಾಡೂನ್‌ನ ಸಹಸ್ರಧಾರಾ ಹೆಲಿಪೋರ್ಟ್ ತಲುಪಬೇಕಿದ್ದ ಹೆಲಿಕಾಪ್ಟರ್ ಜೋಶಿಮಠ ಕಣಿವೆಯ ಮೇಲೆ ಹಾರುತ್ತಿದ್ದಾಗ ಸಂಪರ್ಕ ಕಳೆದುಕೊಂಡಿತು.
ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ, ಅಪಘಾತಕ್ಕೀಡಾದ ಹೆಲಿಕಾಪ್ಟರ್‌ನ ನೋಂದಣಿ ಸಂಖ್ಯೆ ವಿಟಿ–ಎಚ್‌ಸಿಎಕ್ಸ್ ಆಗಿದೆ. ಸಂಪರ್ಕ ಕಡಿತಗೊಂಡ ಸಮಯದಲ್ಲಿಯೇ ಅದರ ಸ್ಥಳ ಗುರುತಿಸುವ ವ್ಯವಸ್ಥೆಯಿಂದಲೂ ಸಂಕೇತಗಳು ಸ್ಥಗಿತಗೊಂಡಿದ್ದವು.
ಚಮೋಲಿ ಜಿಲ್ಲೆಯ ಚಾಯ್ ಗ್ರಾಮದ ಮೇಲ್ಭಾಗದಲ್ಲಿರುವ ಸೇನಾ ಶಿಬಿರದ ಬಳಿ ಹೆಲಿಕಾಪ್ಟರ್ ಕೊನೆಯದಾಗಿ ಸಂಪರ್ಕದಲ್ಲಿತ್ತು. ನಂತರ ಜೆ.ಪಿ. ಪವರ್ ಹೌಸ್ ಸಮೀಪದ ಬೆಟ್ಟದ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿರುವುದು ಪತ್ತೆಯಾಗಿದೆ.
ದುರಂತದಲ್ಲಿ ಅರುಣ ಸಾಳುಂಕೆ, ಎಚ್.ಎಸ್. ನಾಗರಾಜ, ಪ್ರತಾಪ ಬಚ್ಚಿಹಳ್ಳಿ ನಿಂಗರಾಜನ್, ಸುಧೀರ್ ಕೆ. ಹಾಗೂ ಶಂಕರಗೌಡ ವಿ.ಬಿ. ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಹೆಲಿಕಾಪ್ಟರ್ ಚಾಲಕ ಕ್ಯಾಪ್ಟನ್ ಹಿಮಾಂಶು ಸಭರ್ವಾಲ್ ಕೂಡ ಮೃತಪಟ್ಟವರಲ್ಲಿ ಸೇರಿದ್ದಾರೆ.
ಅಪಘಾತದ ಮಾಹಿತಿ ದೊರೆಯುತ್ತಿದ್ದಂತೆಯೇ ಭಾರತೀಯ ಸೇನೆ, ಸ್ಥಳೀಯ ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಮತ್ತೊಂದು ಹೆಲಿಕಾಪ್ಟರ್ ಮೂಲಕ ವೈಮಾನಿಕ ಶೋಧ ಕಾರ್ಯಾಚರಣೆಯನ್ನೂ ನಡೆಸಲಾಯಿತು.
ಅಪಘಾತ ಸಂಭವಿಸಿದ ಪ್ರದೇಶದಲ್ಲಿ ನಿರಂತರ ಮಳೆ ಹಾಗೂ ದಟ್ಟ ಮೋಡ ಕವಿದ ವಾತಾವರಣದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಯಿತು. ಬೆಟ್ಟಗುಡ್ಡಗಳಿಂದ ಕೂಡಿದ ದುರ್ಗಮ ಪ್ರದೇಶದಲ್ಲಿ ದೃಶ್ಯಮಾನತೆ ಕಡಿಮೆಯಾಗಿದ್ದರಿಂದ ಸಿಬ್ಬಂದಿ ತೊಂದರೆ ಎದುರಿಸಿದರು.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಘಟನೆಯ ಕುರಿತು ಮಾಹಿತಿ ಪಡೆದುಕೊಂಡು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು. ಅಪಘಾತದ ಹಿನ್ನೆಲೆಯಲ್ಲಿ ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಯ ಎಲ್ಲ ಹೆಲಿಕಾಪ್ಟರ್‌ಗಳ ಹಾರಾಟವನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಗಿತಗೊಳಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.
ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಉತ್ತರಾಖಂಡದ ಪರ್ವತ ಪ್ರದೇಶಗಳಲ್ಲಿ ಮಳೆ ಮತ್ತು ಹಿಮಪಾತವಾಗುತ್ತಿದ್ದು, ಪ್ರತಿಕೂಲ ಹವಾಮಾನ ಪರಿಸ್ಥಿತಿ ಕಂಡುಬಂದಿದೆ. ಆದರೆ ಹವಾಮಾನವೇ ಅಪಘಾತಕ್ಕೆ ಕಾರಣ ಎಂಬುದು ದೃಢಪಟ್ಟಿಲ್ಲ. ಮೃತ ಅರುಣ ಸಾಳುಂಕೆ ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮದವರು. 2007ರ ಬ್ಯಾಚ್‌ನ ಪೊಲೀಸ್ ಅಧಿಕಾರಿಯಾಗಿದ್ದ ಅವರು, ಆರಂಭದಲ್ಲಿ ದೆಹಲಿಯ ಇಂಟೆಲಿಜೆನ್ಸ್ ಇಲಾಖೆಯಲ್ಲಿ ಇನ್‌ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು.
ನಂತರ ಕರ್ನಾಟಕಕ್ಕೆ ಆಗಮಿಸಿ ನೆಲಮಂಗಲ, ಕುಣಿಗಲ್ ಹಾಗೂ ಬಾಣಸವಾಡಿ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದರು. ಬೆಂಗಳೂರು ನಗರ ಅಪರಾಧ ವಿಭಾಗದಲ್ಲಿಯೂ ಕಾರ್ಯನಿರ್ವಹಿಸಿದ್ದ ಅವರು, ಪ್ರಸ್ತುತ ಬೆಂಗಳೂರು ಸಿಸಿಬಿಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದರು. ಅರುಣ ಸಾಳುಂಕೆ ಅವರ ತಂದೆ ಹಾಗೂ ಸಹೋದರರು ಅರಟಾಳ ಗ್ರಾಮದಲ್ಲಿ ನೆಲೆಸಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ ಎಂದು ತಿಳಿದುಬಂದಿದೆ. ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅರಟಾಳ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಕುಟುಂಬಸ್ಥರು, ಸಂಬಂಧಿಕರು ಹಾಗೂ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.