LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

ಮಾಂಜಾ ದಾರ ಬಳಸಿದರೆ ಕಠಿಣ ಕ್ರಮ: ಬೆಳಗಾವಿ ಎಸ್‌ಪಿ ಎಚ್ಚರಿಕೆ

ಬೆಳಗಾವಿ, ಅ. 2 : (ಸಮದರ್ಶಿ ಸುದ್ದಿ) - ದಸರಾ ಹಬ್ಬದ ಸಂದರ್ಭದಲ್ಲಿ ಗಾಳಿಪಟ ಹಾರಿಸಿ ಸಂಭ್ರಮಿಸುವವರು ಯಾವುದೇ ಕಾರಣಕ್ಕೂ ಅಪಾಯಕಾರಿ ಮಾಂಜಾ ದಾರವನ್ನು ಬಳಸಬಾರದು. ನಿಷೇಧಿತ ಮಾಂಜಾ ದಾರವನ್ನು ಮಾರಾಟ ಮಾಡುವವರು ಹಾಗೂ ಬಳಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಳಿಪಟ ಹಾರಿಸುವ ಸಂಭ್ರಮ ಮತ್ತೊಬ್ಬರ ಜೀವಕ್ಕೆ ಅಪಾಯವಾಗಬಾರದು. ಮಾಂಜಾ ದಾರ ಅತ್ಯಂತ ಹರಿತವಾಗಿದ್ದು, ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಹಾಗೂ ಪಕ್ಷಿಗಳಿಗೂ ಮಾರಕವಾಗಬಹುದು. ಹೀಗಾಗಿ ಸಾರ್ವಜನಿಕರು ಮಾಂಜಾ ದಾರ ಬಳಕೆಯಿಂದ ಸಂಪೂರ್ಣವಾಗಿ ದೂರವಿರಬೇಕು ಎಂದು ಮನವಿ ಮಾಡಿದರು.

ಗುರುವಾರ ಬೆಳಗಾವಿಯ ಗಾಂಧಿನಗರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ 19 ವರ್ಷದ ಧ್ರುವ ಸಂತೋಷ ಕರಜಗಿ ಅವರ ಕುತ್ತಿಗೆಗೆ ಗಾಳಿಪಟದ ಮಾಂಜಾ ದಾರ ಸಿಲುಕಿ ತೀವ್ರ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ. ಈ ದುರಂತವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲು ಮುಂದಾಗಿದೆ.

“ಗಾಳಿಪಟ ಹಾರಿಸುವಾಗ ಮಾಂಜಾ ದಾರ ಬಳಸುವುದು ಅತ್ಯಂತ ಅಪಾಯಕಾರಿ. ಮಾಂಜಾ ಮಾರಾಟ ಮತ್ತು ಬಳಕೆಯನ್ನು ಈಗಾಗಲೇ ನಿಷೇಧಿಸಲಾಗಿದೆ. ಯಾವುದೇ ವ್ಯಾಪಾರಿಯು ಅದನ್ನು ಮಾರಾಟ ಮಾಡಬಾರದು. ಸಾರ್ವಜನಿಕರೂ ಖರೀದಿಸಬಾರದು. ನಿಷೇಧ ಉಲ್ಲಂಘಿಸಿ ಮಾರಾಟ ಅಥವಾ ಬಳಕೆ ಮಾಡುತ್ತಿರುವುದು ಕಂಡುಬಂದರೆ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಎಸ್‌ಪಿ ಎಚ್ಚರಿಸಿದರು.

ನಗರದಲ್ಲಿ ಗಾಳಿಪಟಕ್ಕೆ ಸಂಬಂಧಿಸಿದ ಅಪಘಾತಗಳು ಆತಂಕ ಮೂಡಿಸಿವೆ. ವಡಗಾವಿ ಪ್ರದೇಶದಲ್ಲಿ ಗಾಳಿಪಟ ಹಿಡಿಯಲು ಯತ್ನಿಸುವಾಗ ಕಟ್ಟಡದಿಂದ ಬಿದ್ದು 9 ವರ್ಷದ ಬಾಲಕ ಮೃತಪಟ್ಟ ಘಟನೆ ನಡೆದ ಬೆನ್ನಲ್ಲೇ, ಗಾಂಧಿನಗರದಲ್ಲಿ ಮಾಂಜಾ ದಾರಕ್ಕೆ ಯುವಕ ಬಲಿಯಾಗಿದ್ದಾನೆ. ಎರಡು ದಿನಗಳ ಅವಧಿಯಲ್ಲಿ ಗಾಳಿಪಟಕ್ಕೆ ಸಂಬಂಧಿಸಿದ ಎರಡು ಪ್ರತ್ಯೇಕ ದುರ್ಘಟನೆಗಳಲ್ಲಿ ಇಬ್ಬರು ಮೃತಪಟ್ಟಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಗಾಳಿಪಟ ಹಾರಿಸುವವರು ತಮ್ಮ ಮನರಂಜನೆಯೊಂದಿಗೆ ರಸ್ತೆಯಲ್ಲಿ ಸಂಚರಿಸುವವರ ಸುರಕ್ಷತೆಯನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ವಿಶೇಷವಾಗಿ ಜನದಟ್ಟಣೆ ಪ್ರದೇಶಗಳು, ಪ್ರಮುಖ ರಸ್ತೆಗಳು ಮತ್ತು ವಾಹನ ಸಂಚಾರ ಹೆಚ್ಚಿರುವ ಸ್ಥಳಗಳಲ್ಲಿ ಅಪಾಯಕಾರಿ ದಾರಗಳ ಬಳಕೆಯಿಂದ ಗಂಭೀರ ಅನಾಹುತ ಸಂಭವಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ರಾಮರಾಜನ್ ಕೋರಿದರು.

ಇದೇ ವೇಳೆ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದ ಕುರಿತ ಪ್ರಶ್ನೆಗೆ ಉತ್ತರಿಸಿದ ಎಸ್‌ಪಿ, ಸವದತ್ತಿಯ ಯಲ್ಲಮ್ಮನಗುಡ್ಡ ಸೇರಿದಂತೆ ಜಿಲ್ಲೆಯ ವಿವಿಧೆಡೆ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದು ಗಮನಕ್ಕೆ ಬಂದಿದೆ ಎಂದರು.

ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ನಿರ್ಲಕ್ಷ್ಯ ವಹಿಸಿದ ಹಾಗೂ ವ್ಯಾಪಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡ ಆರೋಪ ಎದುರಿಸಿದ ಕೆಲವು ಪೊಲೀಸ್ ಅಧಿಕಾರಿಗಳನ್ನು ಈಗಾಗಲೇ ವರ್ಗಾವಣೆ ಮಾಡಲಾಗಿದೆ. ಅಕ್ರಮ ಚಟುವಟಿಕೆಗಳಿಗೆ ಪೊಲೀಸ್ ಇಲಾಖೆಯಲ್ಲಿ ಅವಕಾಶ ನೀಡುವುದಿಲ್ಲ. ಮುಂದಿನ ದಿನಗಳಲ್ಲಿಯೂ ಕಾರ್ಯಾಚರಣೆ ಮುಂದುವರಿಸಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲಾಗುವುದು ಎಂದು ಅವರು ತಿಳಿಸಿದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST