ಐಚಿ-ನಗೋಯಾ, ಅ. 2 : ಏಷ್ಯನ್ ಗೇಮ್ಸ್‌ನಲ್ಲಿ 44 ವರ್ಷಗಳ ಚಿನ್ನದ ಪದಕದ ಬರವನ್ನು ಭಾರತೀಯ ಮಹಿಳಾ ಹಾಕಿ ತಂಡ ಕೊನೆಗೊಳಿಸಿದೆ. ಫೈನಲ್‌ನಲ್ಲಿ ಬಲಿಷ್ಠ ಚೀನಾವನ್ನು 1-0 ಗೋಲಿನಿಂದ ಮಣಿಸಿದ ಭಾರತ, 1982ರ ಬಳಿಕ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ಮಹಿಳಾ ಹಾಕಿಯಲ್ಲಿ ಚಿನ್ನ ಗೆದ್ದಿದೆ. ಇದೇ ಗೆಲುವಿನೊಂದಿಗೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆಯನ್ನೂ ಪಡೆದುಕೊಂಡಿದೆ.
ಪಂದ್ಯದ ಆರಂಭದಿಂದಲೇ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಿತು. 10ನೇ ನಿಮಿಷದಲ್ಲಿ ಲಾಲ್ರೆಮ್ಸಿಯಾಮಿ ರಿವರ್ಸ್ ಸ್ಟಿಕ್ ಮೂಲಕ ಅದ್ಭುತ ಗೋಲು ದಾಖಲಿಸಿ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು. ವಿಶೇಷವೆಂದರೆ ಇದು ಅವರ 200ನೇ ಅಂತರರಾಷ್ಟ್ರೀಯ ಪಂದ್ಯವಾಗಿತ್ತು.
ನಂತರ ಚೀನಾ ಸಮಬಲದ ಗೋಲಿಗಾಗಿ ಸತತ ದಾಳಿ ನಡೆಸಿತು. ಚೀನಾಕ್ಕೆ ದೊರೆತ ಪೆನಾಲ್ಟಿ ಸ್ಟ್ರೋಕ್ ಭಾರತದ ಪಾಲಿಗೆ ಆತಂಕ ತಂದಿತ್ತಾದರೂ, ಅನುಭವಿ ಗೋಲ್‌ಕೀಪರ್ ಸವಿತಾ ಪುನಿಯಾ ಅದ್ಭುತವಾಗಿ ಚೆಂಡನ್ನು ತಡೆದು ಮುನ್ನಡೆಯನ್ನು ಕಾಪಾಡಿದರು. ಉಳಿದ ಅವಧಿಯಲ್ಲೂ ಭಾರತದ ರಕ್ಷಣಾ ಪಡೆ ಚೀನಾದ ದಾಳಿಗಳನ್ನು ಯಶಸ್ವಿಯಾಗಿ ತಡೆದಿತು.
ಅಂತಿಮ ಸೀಟಿ ಮೊಳಗುತ್ತಿದ್ದಂತೆಯೇ ಭಾರತೀಯ ಆಟಗಾರ್ತಿಯರ ಸಂಭ್ರಮ ಮುಗಿಲು ಮುಟ್ಟಿತು. ಭಾರತ ಕೊನೆಯ ಬಾರಿ 1982ರ ಹೊಸದಿಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ಹಾಕಿ ಚಿನ್ನ ಗೆದ್ದಿತ್ತು. ನಂತರ 1998 ಮತ್ತು 2018ರಲ್ಲಿ ಫೈನಲ್ ತಲುಪಿದ್ದರೂ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತ್ತು.
44 ವರ್ಷಗಳ ಬಳಿಕ ಮತ್ತೆ ಏಷ್ಯಾದ ಚಾಂಪಿಯನ್ ಪಟ್ಟ ಅಲಂಕರಿಸಿರುವ ಭಾರತಕ್ಕೆ ಈ ಗೆಲುವು ಮತ್ತೊಂದು ಮಹತ್ವದ ಸಾಧನೆಯನ್ನೂ ತಂದುಕೊಟ್ಟಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಮಹಿಳಾ ಹಾಕಿ ಸ್ಪರ್ಧೆಗೆ ತಂಡ ನೇರ ಅರ್ಹತೆ ಪಡೆದಿದೆ.
ಈ ಚಿನ್ನದೊಂದಿಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಪದಕಗಳ ಸಂಖ್ಯೆ 16ಕ್ಕೆ ಏರಿದ್ದು, 25 ಬೆಳ್ಳಿ ಮತ್ತು 35 ಕಂಚು ಸೇರಿ ಒಟ್ಟು 76 ಪದಕಗಳನ್ನು ಭಾರತ ತನ್ನದಾಗಿಸಿಕೊಂಡಿದೆ.