LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಬೆಳಗಾವಿಯಲ್ಲಿ ₹100 ಕೋಟಿ ವೆಚ್ಚದಲ್ಲಿ ಗಾಂಧೀಜಿ ಸ್ಮಾರಕ

ಬೆಂಗಳೂರು, ಅ. 2 : (ಸಮದರ್ಶಿ ಸುದ್ದಿ) - ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಐತಿಹಾಸಿಕ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷ ಪೂರ್ಣಗೊಂಡ ಸ್ಮರಣಾರ್ಥ ಬೆಳಗಾವಿಯಲ್ಲಿ ₹100 ಕೋಟಿ ವೆಚ್ಚದಲ್ಲಿ ಬೃಹತ್ ಗಾಂಧೀಜಿ ಸ್ಮಾರಕ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಘೋಷಿಸಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ಶುಕ್ರವಾರ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ವೂಡೇ ಪಿ. ಕೃಷ್ಣ ಅವರಿಗೆ ‘ಗಾಂಧಿ ಸೇವಾ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

ಬೆಳಗಾವಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಗಾಂಧೀಜಿ ಸ್ಮಾರಕಕ್ಕೆ ₹100 ಕೋಟಿ ವೆಚ್ಚ ಮಾಡಲಾಗುವುದು. ಈ ಯೋಜನೆಯ ಕುರಿತು ಮುಂದಿನ ವರ್ಷದ ರಾಜ್ಯ ಆಯವ್ಯಯದಲ್ಲಿ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಶಿವಕುಮಾರ ತಿಳಿಸಿದರು.

ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಬೆಳಗಾವಿಗೆ ವಿಶಿಷ್ಟ ಸ್ಥಾನವಿದೆ. 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದರು. ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ ಎಂಬ ಐತಿಹಾಸಿಕ ಮಹತ್ವವನ್ನು ಇದು ಹೊಂದಿದೆ. ಅದರ ಶತಮಾನೋತ್ಸವದ ಸ್ಮರಣೆಯನ್ನು ಶಾಶ್ವತವಾಗಿ ಉಳಿಸುವ ಉದ್ದೇಶದಿಂದ ಬೃಹತ್ ಸ್ಮಾರಕ ನಿರ್ಮಿಸಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.

ಗಾಂಧೀಜಿಯವರ ವಿಚಾರಧಾರೆ ಮತ್ತು ತತ್ವಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ. ಗಾಂಧೀಜಿಯನ್ನು ಒಪ್ಪಿಕೊಂಡ ಕುಟುಂಬ ಮತ್ತು ಅವರನ್ನು ಒಪ್ಪದೆ ಕೊಂದ ಕುಟುಂಬದ ನಡುವೆ ಸಂಘರ್ಷ ನಡೆಯುತ್ತಿದೆ. ಗಾಂಧೀಜಿಯವರ ಹೆಸರು ಹಾಗೂ ತತ್ವಗಳನ್ನು ಅಳಿಸುವ ಪ್ರಯತ್ನಗಳ ನಡುವೆಯೂ ಅವುಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಶಿವಕುಮಾರ ಹೇಳಿದರು.

ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಅವರ ವಿಚಾರಧಾರೆ ಕುರಿತು ಗಂಭೀರ ಅಧ್ಯಯನ ಮತ್ತು ಚರ್ಚೆಗಳು ನಡೆಯುತ್ತಿವೆ. ಜಗತ್ತಿನ ಅನೇಕ ನಾಯಕರು ಗಾಂಧೀಜಿಯವರನ್ನು ಮಾದರಿಯಾಗಿ ಸ್ವೀಕರಿಸಿದ್ದಾರೆ. ಇಂತಹ ಮಹಾನ್ ನಾಯಕ ಹುಟ್ಟಿದ ದೇಶದಲ್ಲಿ ನಾವು ಬದುಕುತ್ತಿರುವುದು ನಮ್ಮೆಲ್ಲರ ಭಾಗ್ಯ ಎಂದು ಹೇಳಿದರು.

ಗಾಂಧೀಜಿ ನಿಧನರಾದಾಗ ವಿಶ್ವಸಂಸ್ಥೆಯ ಕಟ್ಟಡದಲ್ಲಿ ವಿವಿಧ ರಾಷ್ಟ್ರಗಳ ಧ್ವಜಗಳನ್ನು ಇಳಿಸಿ ಗೌರವ ಸಲ್ಲಿಸಲಾಗಿತ್ತು ಎಂದು ಸ್ಮರಿಸಿದ ಅವರು, ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಿಂದ ಗಾಂಧೀಜಿಯವರ ಹೆಸರನ್ನು ಏಕೆ ತೆಗೆದುಹಾಕಿತು ಎಂಬುದು ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗಾಂಧೀಜಿಯವರ ಹೆಸರು ಮುಂದುವರಿದಿದ್ದರೆ ಏನು ತೊಂದರೆಯಾಗುತ್ತಿತ್ತು? ದೇಶವನ್ನು ಆಳುತ್ತಿರುವವರಿಗೆ ಅವರ ಹೆಸರನ್ನು ತೆಗೆದುಹಾಕಬೇಕೆಂದು ಏಕೆ ಅನಿಸಿತು ಎಂಬುದರ ಕುರಿತು ಚರ್ಚೆಯಾಗಬೇಕು ಎಂದು ಪ್ರತಿಪಾದಿಸಿದರು.

ರಾಜ್ಯದಲ್ಲಿ ಗಾಂಧೀಜಿ ಭೇಟಿ ನೀಡಿದ್ದ ಎಲ್ಲ ಜಿಲ್ಲೆಗಳಲ್ಲಿ ಸ್ಮಾರಕ ಸ್ತಂಭಗಳನ್ನು ನಿರ್ಮಿಸುವ ಕಾರ್ಯವನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು. ಇದಕ್ಕೆ ಸರ್ಕಾರ ಅಗತ್ಯ ಆರ್ಥಿಕ ನೆರವು ನೀಡಲಿದೆ ಎಂದು ಶಿವಕುಮಾರ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಆಹಾರ ಇಲಾಖೆ ಸಚಿವ ರಿಜ್ವಾನ್ ಅರ್ಷದ್, ಗಾಂಧೀ ತತ್ವವನ್ನು ಕಡೆಗಣಿಸುವ ಪ್ರಯತ್ನಗಳು ದೇಶದಲ್ಲಿ ನಡೆಯುತ್ತಿವೆ. ಆದರೆ ಜಗತ್ತು ಇರುವವರೆಗೂ ಗಾಂಧೀಜಿಯವರ ವಿಚಾರಧಾರೆಯನ್ನು ಅಳಿಸಲು ಸಾಧ್ಯವಿಲ್ಲ. ಅವರ ಅಹಿಂಸಾ ತತ್ವಕ್ಕೆ ಪರ್ಯಾಯವೇ ಇಲ್ಲ ಎಂದು ಹೇಳಿದರು.

ಶಾಸಕ ಹಾಗೂ ಗಾಂಧೀ ಭಾರತ ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ವ್ಯಸನಮುಕ್ತ ಗ್ರಾಮಗಳ ನಿರ್ಮಾಣಕ್ಕೆ ನೇತೃತ್ವ ವಹಿಸಿದವರ ಕಾರ್ಯವನ್ನು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಗಾಂಧೀ ಮ್ಯೂಸಿಯಂ ಅನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಲೋಕಾರ್ಪಣೆಗೊಳಿಸಿದರು. ಮಂಜುನಾಥ್ ಚಾಂದ್ ಅವರ ‘ಮಹಾತ್ಮನ ಮಗಳು’ ಹಾಗೂ ರಮೇಶ್ ಬಿಳಿಕೆರೆ ಅವರ ‘ಮರೆಯಲಾಗದ ಮಾಣಿಕ್ಯ ಟಿ.ಎಸ್. ಸುಬ್ಬಣ್ಣ’ ಕೃತಿಗಳಿಗೆ ಶ್ರೀಮತಿ ಜಯಲಕ್ಷ್ಮಿ ಹೊ. ಶ್ರೀನಿವಾಸಯ್ಯ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೊಪ್ಪಳ ಜಿಲ್ಲೆಯ ವ್ಯಸನಮುಕ್ತ ಗ್ರಾಮಗಳಿಗೆ ‘ಗಾಂಧಿ ಗ್ರಾಮ ಪುರಸ್ಕಾರ’ ನೀಡಲಾಯಿತು.

ಮೈಸೂರಿನ ಕಡಕೊಳದ ಶೇಷಾದ್ರಿಪುರಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎನ್‌ಎಸ್‌ಎಸ್ ಅಧಿಕಾರಿ ಆರ್. ರಾಘವೇಂದ್ರ ಹಾಗೂ ಬೆಳಗಾವಿ ಜಿಲ್ಲೆಯ ಕುಡಚಿಯ ಬಿ. ಶಂಕರಾನಂದ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಸುರೇಖಾ ಅಶೋಕ ಬೆಳಗಲಿ ಅವರಿಗೆ ‘ಪ್ರೊ. ಜಿ.ಬಿ. ಶಿವರಾಜು ಅತ್ಯುತ್ತಮ ಎನ್‌ಎಸ್‌ಎಸ್ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ರಾಜ್ಯಮಟ್ಟದ ಉತ್ತಮ ಎನ್‌ಎಸ್‌ಎಸ್ ಸ್ವಯಂಸೇವಕ ಪುರಸ್ಕಾರವನ್ನು ತುಮಕೂರಿನ ಜಿ.ಎ. ಸಿದ್ದೇಶ್, ಮಸ್ಕಿಯ ಜೆ. ನಾಗರಾಜ, ಮಂಡ್ಯದ ಚೈತ್ರಾ ಸಿ. ಹಾಗೂ ರಾಯಚೂರಿನ ಜೆ.ಎಸ್. ಸುಷ್ಮಾ ಅವರಿಗೆ ನೀಡಲಾಯಿತು.

ಕೆ.ಎಸ್. ನರಸಿಂಹಸ್ವಾಮಿ ಅವರ ಅನುವಾದಿತ ಕೃತಿ ‘ನನ್ನ ಕನಸಿನ ಭಾರತ ಮತ್ತು ಮೋಹನ ಮಾಲೆ’, ಫ್ರಾನ್ಸಿಸ್ ವ್ಯಾಟ್ಸನ್ ಮತ್ತು ಮೌರಿಸ್ ಬ್ರೌನ್ ಅವರ ‘ಗಾಂಧಿ ಸಂಕಥನ: ಬಹುಮುಖ ನೋಟ’ ಹಾಗೂ ಅರವಿಂದ ಚೊಕ್ಕಾಡಿ ಅವರ ‘ಆಸುಪಾಸಿನಲ್ಲಿ ಗಾಂಧಿ’ ಕೃತಿಗಳನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ, ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ, ಇಲಾಖೆಯ ಕಾರ್ಯದರ್ಶಿ ಜೆ. ಮಂಜುನಾಥ್, ಆಯುಕ್ತ ಎಂ.ಎನ್. ಅನುಚೇತ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST