ಹೊಸದಿಲ್ಲಿ, ನ. 9: ರಾಜಕೀಯ ವಿರೋಧಿಗಳನ್ನು ‘ದಿಮಾಗಿ ನಕ್ಸಲರು’ ಎಂದು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
‘‘ಪ್ರಧಾನಿಯವರ ಸುಳ್ಳುಗಳನ್ನು ಸಿಆರ್‌ಪಿಎಫ್ ಯೋಧರೇ ನಂಬಿಲ್ಲ. ಅವರ ಮುಖಭಾವಗಳೇ ಎಲ್ಲವನ್ನೂ ಹೇಳುತ್ತಿದ್ದವು’’ ಎಂದು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಹೇಳಿದ್ದಾರೆ.
‘‘ದೇಶದ್ರೋಹಿಗಳು ಯಾರು, ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿರುವವರು ಯಾರು ಎಂಬ ಬಗ್ಗೆ ನನ್ನೊಂದಿಗೆ ಬಹಿರಂಗ ಚರ್ಚೆಗೆ ಬರಲಿ. ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಸಿದ್ಧ. ಚರ್ಚೆಯ ಬಳಿಕ ಪ್ರಧಾನಿ ಯಾವುದೇ ಯೋಧನ ಎದುರು ನಿಲ್ಲುವ ಧೈರ್ಯ ತೋರಲಾರರು’’ ಎಂದು ಸವಾಲು ಹಾಕಿದ್ದಾರೆ.
ಭಾನುವಾರ ಛತ್ತೀಸ್‌ಗಢದ ಬಸ್ತಾರ್‌ನಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದ ಮೋದಿ, ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳಲ್ಲಿ ‘ದಿಮಾಗಿ ನಕ್ಸಲರು’ ನುಸುಳಿದ್ದಾರೆ ಎಂದು ಆರೋಪಿಸಿದ್ದರು.
ಮೋದಿ ಹತಾಶರಾಗಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದ್ದರೆ, ಸಂಸತ್ತಿನಲ್ಲಿಯೇ ಚರ್ಚೆ ನಡೆಸುವಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ರಾಹುಲ್‌ಗೆ ತಿರುಗೇಟು ನೀಡಿದ್ದಾರೆ.