ತೆಹ್ರಾನ್, ನ. 9: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತೆ ತೀವ್ರಗೊಳ್ಳುವ ಆತಂಕ ಎದುರಾಗಿದ್ದು, ಎಲ್ಲ ರಂಗಗಳಲ್ಲೂ ಯುದ್ಧ ನಿಲ್ಲಿಸಿ ಸಂಧಾನಕ್ಕೆ ಮುಂದಾಗುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಇರಾನ್ ಕಠಿಣ ಎಚ್ಚರಿಕೆ ನೀಡಿದೆ.
ಇರಾನ್ ಮುಂದಿಟ್ಟಿರುವ ಎರಡು ದಿನಗಳ ಪ್ರಸ್ತಾವನೆಯನ್ನು ಒಪ್ಪಿಕೊಂಡು ಯುದ್ಧ ಅಂತ್ಯಗೊಳಿಸಬೇಕು. ಇಲ್ಲದಿದ್ದರೆ ಯುದ್ಧಸನ್ನದ್ಧ ಇರಾನ್ ಯೋಧರು ಅಮೆರಿಕಕ್ಕೆ ನರಕವನ್ನೇ ತೋರಿಸಲಿದ್ದಾರೆ ಎಂದು ಇರಾನ್ ವಿದೇಶಾಂಗ ಸಚಿವ ಸೆಯ್ಯದ್ ಅಬ್ಬಾಸ್ ಅರಾಘ್ಚಿ ಎಚ್ಚರಿಸಿದ್ದಾರೆ.
ಅಮೆರಿಕದ ಮಧ್ಯಂತರ ಚುನಾವಣಾ ಫಲಿತಾಂಶಗಳ ಬೆನ್ನಲ್ಲೇ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಮಾತುಕತೆಯ ಮೂಲಕ ಸಂಘರ್ಷ ತಗ್ಗಿಸಬೇಕೇ ಅಥವಾ ಭೀಕರ ಪ್ರಾದೇಶಿಕ ಯುದ್ಧಕ್ಕೆ ಅವಕಾಶ ಮಾಡಿಕೊಡಬೇಕೇ ಎಂಬ ನಿರ್ಧಾರ ಈಗ ವಾಷಿಂಗ್ಟನ್ ಕೈಯಲ್ಲಿದೆ ಎಂದು ಹೇಳಿದ್ದಾರೆ.
‘ಅಮೆರಿಕದ ಮತದಾರರು ತಮ್ಮ ಆಯ್ಕೆ ಮಾಡಿದ್ದಾರೆ. ಈಗ ಶ್ವೇತಭವನ ನಿರ್ಧಾರ ತೆಗೆದುಕೊಳ್ಳುವ ಸಮಯ. ನಮ್ಮ ಎರಡು ದಿನಗಳ ಪ್ರಸ್ತಾವನೆ ಇನ್ನೂ ಮುಕ್ತವಾಗಿದೆ. ಎಲ್ಲ ರಂಗಗಳಲ್ಲೂ ಯುದ್ಧ ನಿಲ್ಲಿಸುವ ಷರತ್ತುಗಳನ್ನು ಒಪ್ಪಿಕೊಳ್ಳಿ. ಇಲ್ಲವೇ ಯುದ್ಧವನ್ನು ಆಯ್ಕೆ ಮಾಡಿಕೊಳ್ಳಿ. ಆಗ ನಮ್ಮ ಯುದ್ಧಸನ್ನದ್ಧ ಯೋಧರು ನರಕವನ್ನೇ ಸೃಷ್ಟಿಸಲಿದ್ದಾರೆ’ ಎಂದು ಎಚ್ಚರಿಸಿದ್ದಾರೆ.
ಟೆಹ್ರಾನ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರಾಘ್ಚಿ, ಕದನ ವಿರಾಮಕ್ಕೆ ಸಂಬಂಧಿಸಿದ ರಾಜತಾಂತ್ರಿಕ ಪ್ರಯತ್ನಗಳು ಸದ್ಯ ಸ್ಥಗಿತಗೊಂಡಿವೆ ಎಂದು ತಿಳಿಸಿದ್ದಾರೆ. ಅಮೆರಿಕದ ಚುನಾವಣಾ ಫಲಿತಾಂಶಗಳಿಂದ ಉಂಟಾಗಿರುವ ರಾಜಕೀಯ ಬೆಳವಣಿಗೆಗಳೇ ಇದಕ್ಕೆ ಕಾರಣವಾಗಿದ್ದು, ಮಧ್ಯಸ್ಥಿಕೆ ವಹಿಸುತ್ತಿರುವ ರಾಷ್ಟ್ರಗಳ ಪ್ರತಿನಿಧಿಗಳು ಮತ್ತೆ ಮಾತುಕತೆಗೆ ಮುಂದಾಗಲು ಸ್ವಲ್ಪ ಸಮಯ ಬೇಕಾಗಬಹುದು ಎಂದು ಹೇಳಿದ್ದಾರೆ.
38 ಸೇತುವೆಗಳನ್ನು ಧ್ವಂಸಗೊಳಿಸುವ ಎಚ್ಚರಿಕೆ
ಇದಕ್ಕೆ ಪ್ರತಿಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ನ 38 ಪ್ರಮುಖ ಸೇತುವೆಗಳನ್ನು ಕೇವಲ ಒಂದು ಗಂಟೆಯಲ್ಲಿ ಧ್ವಂಸಗೊಳಿಸುವ ಸಾಮರ್ಥ್ಯ ಅಮೆರಿಕಕ್ಕಿದೆ ಎಂದು ಎಚ್ಚರಿಸಿದ್ದಾರೆ.
ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಇರಾನ್ನ ಪರಮಾಣು ಕಾರ್ಯಕ್ರಮ ಹಾಗೂ ಹಾರ್ಮುಜ್ ಜಲಸಂಧಿ ಪುನಃ ತೆರೆಯುವ ವಿಚಾರದಲ್ಲಿ ಪ್ರಬಲ ಒಪ್ಪಂದ ಏರ್ಪಟ್ಟರೆ ಮತ್ತೆ ಸೇನಾ ಕಾರ್ಯಾಚರಣೆ ನಡೆಸುವ ಅಗತ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ.
‘ಇರಾನ್ ಬಲವಾದ ಒಪ್ಪಂದಕ್ಕೆ ಸಹಿ ಹಾಕಿದರೆ ಮತ್ತೊಂದು ಯುದ್ಧದ ಸಾಧ್ಯತೆ ತೀರಾ ಕಡಿಮೆ. ನಾವು ಈಗಾಗಲೇ ಅವರಿಗೆ ಭಾರೀ ಹೊಡೆತ ನೀಡಿದ್ದೇವೆ. ಅಗತ್ಯವಿದ್ದರೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬಹುದು’ ಎಂದು ಹೇಳಿದ್ದಾರೆ.
‘ನಮ್ಮ ಗುರಿಯಲ್ಲಿರುವ 38 ಸೇತುವೆಗಳನ್ನು ಒಂದು ಗಂಟೆಯೊಳಗೆ ಉರುಳಿಸಬಹುದು. ಆದರೆ, ನಾನು ಅದನ್ನು ಬಯಸುವುದಿಲ್ಲ. ಏಕೆಂದರೆ ಅವುಗಳನ್ನು ಮರುನಿರ್ಮಿಸಲು ಕನಿಷ್ಠ 10 ವರ್ಷ ಬೇಕಾಗಬಹುದು. ಸೇತುವೆ ನಿರ್ಮಾಣ ಎಷ್ಟು ಕಷ್ಟ ಎಂಬುದು ನನಗೆ ಗೊತ್ತಿದೆ’ ಎಂದು ಟ್ರಂಪ್ ಹೇಳಿದ್ದಾರೆ.
ಉಭಯ ದೇಶಗಳ ನಾಯಕರ ಪರಸ್ಪರ ಎಚ್ಚರಿಕೆಗಳ ನಡುವೆ ಕದನ ವಿರಾಮ ಮಾತುಕತೆಗಳು ಸ್ಥಗಿತಗೊಂಡಿರುವುದು ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಭೀಕರ ಸಂಘರ್ಷದ ಆತಂಕವನ್ನು ಹೆಚ್ಚಿಸಿದೆ.