LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ಜ್ಞಾನೇಶ ಕುಮಾರ ವಿರುದ್ಧ ಸುಪ್ರೀಂ ಕೋರ್ಟಗೆ ಪಿಐಎಲ್‌

ಹೊಸದಿಲ್ಲಿ, ಸೆ. 25 : (ಸಮದರ್ಶಿ ಸುದ್ದಿ) - ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌)ಗೆ ಸಂಬಂಧಿಸಿದಂತೆ ಇಬ್ಬರು ಚುನಾವಣಾ ಆಯುಕ್ತರ ಆಕ್ಷೇಪಗಳ ನಡುವೆಯೂ ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸುಪ್ರೀಂ ಕೋರ್ಟನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಈ ಅರ್ಜಿ ಸಲ್ಲಿಸಿದ್ದಾರೆ.

ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಎಸ್‌ಐಆರ್‌ ಸೇರಿದಂತೆ ವಿವಿಧ ವಿಷಯಗಳಲ್ಲಿ ಕನಿಷ್ಠ 14 ಬಾರಿ ಲಿಖಿತ ಆಕ್ಷೇಪ ದಾಖಲಿಸಿದ್ದರು ಎಂಬ ಮಾಧ್ಯಮ ವರದಿಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಚುನಾವಣಾ ಆಯೋಗವು ಈ ವಿವರಣೆಯನ್ನು ಪ್ರಶ್ನಿಸಿದ್ದು, ಆಂತರಿಕ ಟಿಪ್ಪಣಿಗಳು ಮತ್ತು ಭಿನ್ನ ಅಭಿಪ್ರಾಯಗಳು ಸಾಮಾನ್ಯ ಪರಿಶೀಲನಾ ಪ್ರಕ್ರಿಯೆಯ ಭಾಗವಾಗಿದ್ದು, ಅಂತಿಮ ನಿರ್ಧಾರಗಳು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.

2023ರ ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ ಕಾಯ್ದೆಯ ಸೆಕ್ಷನ್ 18ರ ಅನ್ವಯ ಬಹುಮತದ ಒಪ್ಪಿಗೆಯಿಲ್ಲದೆ ಕೈಗೊಳ್ಳಲಾಗಿದೆ ಎನ್ನಲಾದ ನಿರ್ಧಾರಗಳು, ಮಾರ್ಗಸೂಚಿಗಳು, ನಿರ್ದೇಶನಗಳು ಹಾಗೂ ಸಾಫ್ಟ್‌ವೇರ್ ಬದಲಾವಣೆಗಳನ್ನು ಅಸಂವಿಧಾನಿಕ ಮತ್ತು ಅಮಾನ್ಯವೆಂದು ಘೋಷಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಜ್ಞಾನೇಶ್ ಕುಮಾರ್ ಅವರೊಂದಿಗೆ ಹಿರಿಯ ಉಪ ಚುನಾವಣಾ ಆಯುಕ್ತ ಮನೀಶ್ ಗರ್ಗ್ ಮತ್ತು ಮಹಾನಿರ್ದೇಶಕಿ (ಮಾಹಿತಿ ತಂತ್ರಜ್ಞಾನ) ಸೀಮಾ ಖನ್ನಾ ವಿರುದ್ಧವೂ ಕ್ರಮಕ್ಕೆ ಮನವಿ ಮಾಡಲಾಗಿದೆ.

ಅಧಿಕೃತ ಕರ್ತವ್ಯವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿರುವುದು ತನಿಖೆಯಲ್ಲಿ ಕಂಡುಬಂದರೆ ಜನಪ್ರತಿನಿಧಿತ್ವ ಕಾಯ್ದೆ, 1950ರ ಸೆಕ್ಷನ್ 32ರಡಿ ಸಂಬಂಧಪಟ್ಟವರ ವಿರುದ್ಧ ವಿಚಾರಣೆ ಹಾಗೂ ಕಾನೂನು ಕ್ರಮ ಆರಂಭಿಸುವಂತೆಯೂ ಅರ್ಜಿದಾರರು ಕೋರಿದ್ದಾರೆ.

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ದೇಶದಾದ್ಯಂತ ಸುಮಾರು 13 ಕೋಟಿ ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂಬ ಅರ್ಜಿದಾರರ ಆರೋಪದ ಕುರಿತು ನಿವೃತ್ತ ಸುಪ್ರೀಂ ಕೋರ್ಟ ನ್ಯಾಯಮೂರ್ತಿಯ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಅಥವಾ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಬೇಕೆಂದೂ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಇಸಿಐನೆಟ್‌ ಮತ್ತು ಇರೋನೆಟ್‌ ದತ್ತಾಂಶಗಳ ವಿಧಿವಿಜ್ಞಾನ ಪರಿಶೀಲನೆಯನ್ನೂ ಕೋರಲಾಗಿದೆ.

ಇದರೊಂದಿಗೆ ಮತದಾರರ ನೋಂದಣಿ ನಿಯಮಗಳು, 1960ರ ಅಡಿಯಲ್ಲಿ ನಿಗದಿಪಡಿಸಲಾದ ಮೂಲ ಫಾರಂ-6 ಅನ್ನು ಮರುಸ್ಥಾಪಿಸಿ, ಅರ್ಹ ವಯಸ್ಕರು ಕಾನೂನಿನಲ್ಲಿರುವ ಮೂಲ ಪ್ರಕ್ರಿಯೆಯಂತೆ ಮತದಾರರಾಗಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST