ಮುಂಬೈ, ಸೆ. 25 : (ಸಮದರ್ಶಿ ಸುದ್ದಿ) - ಚುನಾವಣೆಗಳಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸುತ್ತಲೇ ಅದರಲ್ಲಿ ವಿರೋಧ ಪಕ್ಷಗಳು ಸ್ಪರ್ಧಿಸುವುದು ಆ ಚುನಾವಣೆಗೆ ಮಾನ್ಯತೆ ನೀಡಿದಂತಾಗುತ್ತದೆ. ಆದ್ದರಿಂದ ಅಕ್ರಮ ನಡೆಯುತ್ತಿದೆ ಎಂದು ನಂಬಿರುವ ಚುನಾವಣೆಗಳನ್ನು ಬಹಿಷ್ಕರಿಸಬೇಕು ಎಂದು ‘ಕಾಕ್ರೋಚ್ ಜನತಾ ಪಾರ್ಟಿ’ ಸಂಸ್ಥಾಪಕ ಅಭಿಜಿತ್ ದೀಪ್ಕೆ ಕರೆ ನೀಡಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಅಕ್ರಮ ನಡೆಯುತ್ತಿರುವಾಗಲೂ ಚುನಾವಣೆಯಲ್ಲಿ ಭಾಗವಹಿಸಿದರೆ, ಚುನಾವಣೆ ನ್ಯಾಯಯುತವಾಗಿ ನಡೆಯುತ್ತಿದೆ ಎಂಬ ಭ್ರಮೆಯನ್ನು ಉಳಿಸಿಕೊಳ್ಳಲು ನೀವೇ ನೆರವಾಗುತ್ತೀರಿ’ ಎಂದು ಹೇಳಿದ್ದಾರೆ.
ಚುನಾವಣೆಯನ್ನು ‘ಫಿಕ್ಸಿಂಗ್ ನಡೆದ ಪಂದ್ಯ’ಕ್ಕೆ ಹೋಲಿಸಿರುವ ದೀಪ್ಕೆ, ‘ಅಂತಹ ಪಂದ್ಯದಲ್ಲೂ ಎಲ್ಲ ಕ್ಯಾಚ್‌ಗಳನ್ನು ಕೈಚೆಲ್ಲುವುದಿಲ್ಲ. ಕೆಲವು ಕ್ಯಾಚ್‌ಗಳನ್ನು ಹಿಡಿದು ಪಂದ್ಯವನ್ನು ಕೊನೆಯ ಓವರ್‌ವರೆಗೂ ಕೊಂಡೊಯ್ಯಲಾಗುತ್ತದೆ. ಅದೇ ರೀತಿ ಕೆಲವು ಗೆಲುವುಗಳನ್ನು ನೀಡುವ ಮೂಲಕ ನಿಜವಾದ ಸ್ಪರ್ಧೆ ನಡೆಯುತ್ತಿದೆ ಎಂಬ ಭಾವನೆ ಮೂಡಿಸಲಾಗುತ್ತದೆ’ ಎಂದು ಹೇಳಿದ್ದಾರೆ.
‘ಮತಗಳನ್ನು ಕದಿಯಲಾಗುತ್ತಿದೆ, ಶಾಸಕರು ಮತ್ತು ಸಂಸದರನ್ನು ಆಮಿಷವೊಡ್ಡಿ ಸೆಳೆಯಲಾಗುತ್ತಿದೆ ಹಾಗೂ ಪಕ್ಷಗಳನ್ನೇ ಒಡೆಯಲಾಗುತ್ತಿದೆ ಎಂದು ಆರೋಪಿಸುತ್ತಿರುವಾಗ ಯಾವ ರೀತಿಯ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ?’ ಎಂದು ಅವರು ವಿರೋಧ ಪಕ್ಷಗಳನ್ನು ಪ್ರಶ್ನಿಸಿದ್ದಾರೆ.
ಚುನಾವಣಾ ಅಕ್ರಮದ ಆರೋಪಗಳನ್ನು ರಾಜ್ಯ ಅಥವಾ ಪಕ್ಷದ ಆಧಾರದಲ್ಲಿ ನೋಡಬಾರದು ಎಂದಿರುವ ದೀಪ್ಕೆ, ‘ಆಟದಲ್ಲಿ ಮೋಸವಿದೆ ಎಂದು ಹೇಳುತ್ತಲೇ ಅದೇ ಆಟದಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ರಾಜಕೀಯ ಉಳಿವಿಗಿಂತ ಮೊದಲು ದೇಶ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಯೋಚಿಸಿ. ದೃಢ ನಿಲುವು ತಳೆದು ಅಕ್ರಮ ಚುನಾವಣೆಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಿ’ ಎಂದು ಕರೆ ನೀಡಿದ್ದಾರೆ.