ವಾಷಿಂಗ್ಟನ್, ನ. 21: ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಸಿವಿಲ್ ಮೊಕದ್ದಮೆಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಗುಪ್ತಚರ ಸಂಸ್ಥೆ ‘ರಾ’ದ ಮಾಜಿ ಮುಖ್ಯಸ್ಥ ಸಮಂತ್ ಗೋಯಲ್ ಅವರಿಗೆ ಸಮನ್ಸ್ ತಲುಪಿಸಲು ಅಮೆರಿಕದ ನ್ಯಾಯಾಲಯ ಕ್ರಮ ಕೈಗೊಂಡಿದೆ.
ನ್ಯೂಯಾರ್ಕ್ನ ದಕ್ಷಿಣ ಜಿಲ್ಲಾ ನ್ಯಾಯಾಲಯವು ನವೆಂಬರ್ 13ರಂದು ಹೊರಡಿಸಿದ ಆದೇಶದಂತೆ, ಶುಕ್ರವಾರ ನವದೆಹಲಿಯ ಪಟಿಯಾಲ ಹೌಸ್, ತೀಸ್ ಹಜಾರಿ ಹಾಗೂ ದ್ವಾರಕಾ ಜಿಲ್ಲಾ ನ್ಯಾಯಾಲಯಗಳಿಗೆ ಫೆಡ್ಎಕ್ಸ್ ಮೂಲಕ ಸಮನ್ಸ್ ರವಾನಿಸಲಾಗಿದೆ.
ಪ್ರತಿವಾದಿಗಳಿಗೆ ನ್ಯಾಯಾಲಯದ ದಾಖಲೆಗಳನ್ನು ತಲುಪಿಸಲು ಭಾರತೀಯ ನ್ಯಾಯಾಲಯಗಳ ಸಹಕಾರ ಅಗತ್ಯವಿದೆ ಎಂದು ನ್ಯಾಯಾಧೀಶೆ ಕ್ಯಾಥರೀನ್ ಪೋಕ್ ಫೈಲ್ಲಾ ತಿಳಿಸಿದ್ದಾರೆ. ಹೇಗ್ ಸಮಾವೇಶದಡಿ ಭಾರತದ ಕೇಂದ್ರ ಪ್ರಾಧಿಕಾರದ ಮೂಲಕ ಸಮನ್ಸ್ ತಲುಪಿಸುವ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗಕ್ಕೆ ಅನುಮತಿ ನೀಡಲಾಗಿದೆ.
ದೋವಲ್ ವಿರುದ್ಧ ಪನ್ನುನ್ ಆರೋಪ
ಭಾರತದಲ್ಲಿ ನಿಷೇಧಿತವಾಗಿರುವ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯ ಕಾನೂನು ಸಲಹೆಗಾರ ಪನ್ನುನ್, ತಮ್ಮ ಹತ್ಯೆಗೆ ಭಾರತದ ಗುಪ್ತಚರ ಸಂಸ್ಥೆಯನ್ನು ಬಳಸಿಕೊಂಡು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿ ಅಮೆರಿಕದಲ್ಲಿ ಪರಿಹಾರ ಕೋರಿ ಸಿವಿಲ್ ಮೊಕದ್ದಮೆ ದಾಖಲಿಸಿದ್ದಾರೆ.
ಈ ಸಂಚಿನಲ್ಲಿ ದೋವಲ್ ಹಾಗೂ ಗೋಯಲ್ ಪಾತ್ರವಿದೆ ಎಂಬುದು ಪನ್ನುನ್ ಆರೋಪವಾಗಿದ್ದು, ಅದು ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ. ಪನ್ನುನ್ ಆರೋಪಗಳನ್ನು ಭಾರತ ಸರ್ಕಾರ ತಿರಸ್ಕರಿಸಿದೆ. ನವೆಂಬರ್ 10ರಂದು ಪ್ರತಿಕ್ರಿಯಿಸಿದ್ದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್, ಭಾರತದ ಉನ್ನತ ಅಧಿಕಾರಿಗಳ ವಿರುದ್ಧದ ಆರೋಪಗಳು ಕಪೋಲಕಲ್ಪಿತ ಹಾಗೂ ದುರುದ್ದೇಶಪೂರಿತವಾಗಿವೆ ಎಂದು ಹೇಳಿದ್ದರು.
ಭಾರತದಲ್ಲಿ ವಿದೇಶಿ ನ್ಯಾಯಾಲಯಗಳ ದಾಖಲೆಗಳನ್ನು ತಲುಪಿಸುವ ಪ್ರಕ್ರಿಯೆಯು ಕೇಂದ್ರ ಸರ್ಕಾರ ಗೊತ್ತುಪಡಿಸಿರುವ ಕಾನೂನು ಮತ್ತು ನ್ಯಾಯ ಸಚಿವಾಲಯದ ಮೂಲಕವೇ ನಡೆಯಬೇಕು ಎಂದು ಸ್ಪಷ್ಟಪಡಿಸಿದ್ದರು.
ಪನ್ನುನ್ ವಿರುದ್ಧ ಭಾರತದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳಿವೆ. ಇದೀಗ ಅಮೆರಿಕದ ನ್ಯಾಯಾಲಯ ಭಾರತೀಯ ನ್ಯಾಯಾಲಯಗಳ ಮೂಲಕ ಸಮನ್ಸ್ ತಲುಪಿಸಲು ಮುಂದಾಗಿರುವುದು ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.