ಹೇಗ್, ನ. 19: ಮ್ಯಾನ್ಮಾರ್ನಲ್ಲಿ 2017ರಲ್ಲಿ ಮುಸ್ಲಿಂ ಅಲ್ಪಸಂಖ್ಯಾತ ರೋಹಿಂಗ್ಯಾ ಸಮುದಾಯದ ವಿರುದ್ಧ ನಡೆದ ಹಿಂಸಾಚಾರವು ಸರಕಾರ ಪ್ರಾಯೋಜಿತ ನರಮೇಧವಾಗಿದೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ನರಮೇಧಕ್ಕೆ ಸಂಬಂಧಿಸಿದಂತೆ ದೇಶವೊಂದನ್ನು ಹೊಣೆಗಾರ ಎಂದು ನ್ಯಾಯಾಲಯ ಘೋಷಿಸಿರುವುದು ಇದೇ ಮೊದಲು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮುಸ್ಲಿಂ ಬಾಹುಳ್ಯದ ಗ್ಯಾಂಬಿಯಾ ಸಲ್ಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, 1948ರ ನರಮೇಧ ತಡೆ ಮತ್ತು ಶಿಕ್ಷೆ ಕುರಿತ ವಿಶ್ವಸಂಸ್ಥೆಯ ಒಪ್ಪಂದದ ಅಡಿಯಲ್ಲಿ ಮ್ಯಾನ್ಮಾರ್ನ ಹೊಣೆಗಾರಿಕೆಯನ್ನು ನಿರ್ಧರಿಸಿದೆ. ಈ ತೀರ್ಪನ್ನು ವಿಶ್ವದ ಹಲವು ಸರಕಾರಗಳು, ಮಾನವ ಹಕ್ಕುಗಳ ಸಂಘಟನೆಗಳು ಹಾಗೂ ರೋಹಿಂಗ್ಯಾ ಸಮುದಾಯದವರು ಗಮನಿಸುತ್ತಿದ್ದರು.
ತೀರ್ಪನ್ನು ಸ್ವಾಗತಿಸಿರುವ ಅಮ್ನೆಸ್ಟಿ ಇಂಟರ್ನ್ಯಾಷನಲ್, ರೋಹಿಂಗ್ಯಾ ಸಮುದಾಯದ ಮೇಲಿನ ದೌರ್ಜನ್ಯಗಳನ್ನು ಮ್ಯಾನ್ಮಾರ್ ಹಲವು ವರ್ಷಗಳಿಂದ ನಿರಾಕರಿಸುತ್ತಿತ್ತು. ಇದೀಗ ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗೆ ಐತಿಹಾಸಿಕ ನ್ಯಾಯ ದೊರೆತಿದೆ ಎಂದು ಪ್ರತಿಕ್ರಿಯಿಸಿದೆ.
ಗ್ಯಾಂಬಿಯಾ ಪರ ನಿಯೋಗದಲ್ಲಿದ್ದ ರೋಹಿಂಗ್ಯಾ ಹೋರಾಟಗಾರ್ತಿ ಯಾಸ್ಮಿನ್ ಉಲ್ಲಾ, ‘ನಾನು ನರಮೇಧದಿಂದ ಬದುಕುಳಿದವಳು. ನಮ್ಮ ಸಮುದಾಯದ ಮೇಲೆ ನಡೆದ ದೌರ್ಜನ್ಯವನ್ನು ವಿಶ್ವದ ಅತ್ಯುನ್ನತ ನ್ಯಾಯಾಲಯ ಗುರುತಿಸಿದೆ. ನಮಗೆ ಏನಾಯಿತು ಎಂಬುದು ತಿಳಿಯಲು ತೀರ್ಪಿನ ಅಗತ್ಯವಿರಲಿಲ್ಲ. ಆದರೆ ನಮ್ಮ ನೋವನ್ನು ಜಗತ್ತು ಗುರುತಿಸಬೇಕಿತ್ತು. ಇಂದು ಅದು ಸಾಧ್ಯವಾಗಿದೆ’ ಎಂದು ಹೇಳಿದ್ದಾರೆ.