ಹೊಸದಿಲ್ಲಿ, ನ. 20: ಭಾರತದೊಂದಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸಂಬಂಧ ಸುಧಾರಿಸುವ ವಿಶ್ವಾಸವಿದೆ ಎಂದು ಪಾಕಿಸ್ತಾನದ ಹವಾಮಾನ ಬದಲಾವಣೆ ಸಚಿವ ಮುಸಾದಿಕ್ ಮಸೂದ್ ಮಲಿಕ್ ಹೇಳಿದ್ದಾರೆ. ಆದರೆ, ಉಭಯ ದೇಶಗಳ ನಡುವಿನ ಸಂಬಂಧ ಹದಗೆಡಲು ಪ್ರಮುಖ ಕಾರಣವಾಗಿರುವ ಗಡಿಯಾಚೆಗಿನ ಭಯೋತ್ಪಾದನೆ ಕುರಿತು ಕೇಳಿದ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದೆ ನುಣುಚಿಕೊಂಡಿದ್ದಾರೆ.
ಶಾಂಘೈ ಸಹಕಾರ ಸಂಸ್ಥೆಯ ನಾಗರಿಕ ಸಂವಾದ ವೇದಿಕೆಯ ಸಭೆಯಲ್ಲಿ ಭಾಗವಹಿಸಲು ಶುಕ್ರವಾರ ಹೊಸದಿಲ್ಲಿಗೆ ಆಗಮಿಸಿದ ಅವರು, ಪ್ರಾದೇಶಿಕ ಸಹಕಾರ ಹಾಗೂ ಬಹುಪಕ್ಷೀಯ ಸಂವಾದದ ಮಹತ್ವದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಈ ಪ್ರದೇಶದಲ್ಲಿ ಭೌಗೋಳಿಕ ರಾಜಕೀಯ ಪರಿಸ್ಥಿತಿ ನಿರಂತರವಾಗಿ ಬದಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ದೇಶಗಳು ಪರಸ್ಪರ ಸಂಪರ್ಕ ಬೆಳೆಸಲು ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ಇತಿಹಾಸ, ಸಂಸ್ಕೃತಿ ಹಾಗೂ ನಾಗರಿಕತೆಯ ಕುರಿತು ಚರ್ಚಿಸುವುದು ಪರಸ್ಪರ ಸಂಬಂಧ ಸುಧಾರಣೆಗೆ ಸಹಕಾರಿಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.
ಗಡಿಯಾಚೆಗಿನ ಭಯೋತ್ಪಾದನೆ ಕುರಿತು ಭಾರತದ ಕಳವಳಗಳ ಬಗ್ಗೆ ಪ್ರಶ್ನಿಸಿದಾಗ, ‘ನಾಳೆ ನನ್ನ ಅಧಿಕೃತ ಹೇಳಿಕೆ ನೀಡುವ ಸಂದರ್ಭದಲ್ಲಿ ಹಲವು ವಿಷಯಗಳ ಕುರಿತು ಮಾತನಾಡುತ್ತೇನೆ’ ಎಂದಷ್ಟೇ ಪ್ರತಿಕ್ರಿಯಿಸಿದರು.
ಶಾಂಘೈ ಸಹಕಾರ ಸಂಸ್ಥೆಯು ವಿವಿಧ ದೇಶಗಳಿಗೆ ಒಂದೇ ವೇದಿಕೆಯಲ್ಲಿ ಚರ್ಚಿಸಲು ಅವಕಾಶ ಕಲ್ಪಿಸಿರುವುದನ್ನು ಸ್ವಾಗತಿಸಿದ ಅವರು, ಗಡಿಗಳನ್ನು ಮೀರಿದ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಬಂಧಗಳನ್ನು ಬಲಪಡಿಸುವ ಅಗತ್ಯವಿದೆ ಎಂದರು.
‘ಭಾರತ, ಪಾಕಿಸ್ತಾನ, ರಶಿಯಾ, ಚೀನಾ ಹಾಗೂ ಮಧ್ಯ ಏಷ್ಯಾದ ದೇಶಗಳ ನಡುವೆ ಶತಮಾನಗಳಿಂದ ನಾಗರಿಕತೆ ಮತ್ತು ಸಂಸ್ಕೃತಿಯ ಸಂಪರ್ಕವಿದೆ. ಪುರಾತತ್ವ ಸ್ಥಳಗಳೇ ಈ ಐತಿಹಾಸಿಕ ಸಂಬಂಧಗಳಿಗೆ ಸಾಕ್ಷಿಯಾಗಿವೆ. ಇಂತಹ ಸಂವಾದಗಳು ಪರಸ್ಪರ ತಿಳಿವಳಿಕೆ ಹೆಚ್ಚಿಸಲು ನೆರವಾಗುತ್ತವೆ’ ಎಂದು ಮುಸಾದಿಕ್ ಮಲಿಕ್ ಹೇಳಿದರು.