ಪಾಟ್ನಾ, ನ. 21: ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಗಂಗಾ ನದಿಗೆ ಅಡ್ಡಲಾಗಿ ₹4,280 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 9.76 ಕಿ.ಮೀ. ಉದ್ದದ ಆರು ಪಥಗಳ ‘ನಿತೀಶ್ ಸೇತು’ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಿದರು. 2012ರಲ್ಲಿ ನಿತೀಶ ಕುಮಾರ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಗೆ ಪ್ರಾಥಮಿಕ ಅನುಮೋದನೆ ದೊರೆತಿದ್ದು, 2015ರ ಜುಲೈ 29ರಂದು ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿತ್ತು.
ದೇಶದ ಅತಿ ಉದ್ದದ ಕೇಬಲ್ ಆಧಾರಿತ ಸೇತುವೆ ಎಂದು ಬಣ್ಣಿಸಲಾಗಿರುವ ಈ ಯೋಜನೆಯು ಬಿಹಾರದ ಸಾರಿಗೆ ಸಂಪರ್ಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ಸೇತುವೆಯನ್ನು ಉದ್ಘಾಟಿಸಿದ ಬಳಿಕ ಪ್ರಧಾನಿ ಮೋದಿ ಅವರು ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಚೌಧರಿ ಹಾಗೂ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರೊಂದಿಗೆ ಸೇತುವೆಯ ಮೇಲೆ ನಡೆದು ಪರಿಶೀಲಿಸಿದರು.
ಉದ್ಘಾಟನಾ ಸಮಾರಂಭಕ್ಕಾಗಿ ಪಾಟ್ನಾಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರನ್ನು ಮಾಜಿ ಮುಖ್ಯಮಂತ್ರಿ ನಿತೀಶ ಕುಮಾರ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಉಭಯ ನಾಯಕರು ಆತ್ಮೀಯವಾಗಿ ಅಪ್ಪಿಕೊಂಡರು.
ವೈಶಾಲಿ ಜಿಲ್ಲೆಯ ಬಿದುಪುರ್ ಪ್ರದೇಶದಿಂದ ಪಾಟ್ನಾದ ಹೊರವಲಯದ ಕಚ್ಚಿ ದರ್ಗಾವರೆಗೆ ಸಂಪರ್ಕ ಕಲ್ಪಿಸುವ ಈ ಸೇತುವೆಗೆ ‘ನಿತೀಶ್ ಸೇತು’ ಎಂದು ನಾಮಕರಣ ಮಾಡಲಾಗಿದೆ. ಗಂಗಾ ನದಿಯ ಎರಡೂ ದಡಗಳ ನಡುವಿನ ಸಂಚಾರವನ್ನು ಸುಗಮಗೊಳಿಸುವುದರ ಜೊತೆಗೆ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವ ನಿರೀಕ್ಷೆಯಿದೆ.
2015ರಲ್ಲಿ ಸೇತುವೆಯ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ನಿಂದ ₹3,472.15 ಕೋಟಿ ಸಾಲ ಪಡೆಯಲು ಕೇಂದ್ರ ಸರ್ಕಾರ ನೆರವು ನೀಡಿದ ಬಳಿಕ ಯೋಜನೆಗೆ ವೇಗ ದೊರೆಯಿತು.
₹34 ಸಾವಿರ ಕೋಟಿಯ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ₹34,000 ಕೋಟಿ ವೆಚ್ಚದ 227 ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು.
ಬಕ್ಸಾರ್ ಉಷ್ಣ ವಿದ್ಯುತ್ ಯೋಜನೆಯ ಎರಡನೇ ಘಟಕ, 26,917 ಫಲಾನುಭವಿಗಳಿಗೆ ಪಕ್ಕಾ ಮನೆಗಳ ಹಸ್ತಾಂತರ, 106 ಆರೋಗ್ಯ ಕೇಂದ್ರಗಳ ಉದ್ಘಾಟನೆ, 11 ನಗರಗಳಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಗಳು, 100 ಎಲೆಕ್ಟ್ರಿಕ್ ಬಸ್ಗಳ ಸೇವೆ ಹಾಗೂ ಪಾಟ್ನಾ ಮತ್ತು ಗಯಾದಲ್ಲಿ ಕೃಷಿ ಮಾರುಕಟ್ಟೆಗಳ ಉದ್ಘಾಟನೆ ಈ ಯೋಜನೆಗಳಲ್ಲಿ ಸೇರಿವೆ.
ಈ ಯೋಜನೆಗಳಿಂದ ಬಿಹಾರದಲ್ಲಿ ಸಾರಿಗೆ, ವಿದ್ಯುತ್, ಆರೋಗ್ಯ, ವಸತಿ ಮತ್ತು ನಗರ ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.