ಮುಂಬಯಿ, ನ. 4: ಬಾಲಿವುಡ್ ನಟ ತುಷಾರ ಕಪೂರ ಅವರಿಗೆ ಜೀವ ಬೆದರಿಕೆ ಬಂದ ಬೆನ್ನಲ್ಲೇ ಮತ್ತೊಬ್ಬ ಖ್ಯಾತ ನಟ ಆಯುಷ್ಮಾನ ಖುರಾನಾ ಅವರಿಗೂ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೆಸರಿನಲ್ಲಿ ಬೆದರಿಕೆ ಸಂದೇಶ ಬಂದಿದ್ದು, ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆ ಇಡಲಾಗಿದೆ ಎಂದು ಮುಂಬಯಿ ಪೊಲೀಸ್ ಮೂಲಗಳು ತಿಳಿಸಿವೆ.
ಬಿಷ್ಣೋಯಿ ಗ್ಯಾಂಗ್ನೊಂದಿಗೆ ಸಂಪರ್ಕ ಹೊಂದಿರುವುದಾಗಿ ಹೇಳಿಕೊಂಡ ವ್ಯಕ್ತಿಯೊಬ್ಬ ಆಯುಷ್ಮಾನ ಖುರಾನಾ ಅವರಿಗೆ ಆಡಿಯೋ ಸಂದೇಶ ಕಳುಹಿಸಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸಂದೇಶ ಕಳುಹಿಸಿದ ವ್ಯಕ್ತಿಯ ಗುರುತು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದು, ಆಡಿಯೋದಲ್ಲಿರುವ ಧ್ವನಿಯನ್ನು ಈಗಾಗಲೇ ಪೊಲೀಸ್ ದಾಖಲೆಗಳಲ್ಲಿರುವ ಶಂಕಿತ ವ್ಯಕ್ತಿಯ ಧ್ವನಿಯ ಮಾದರಿಯೊಂದಿಗೆ ಹೋಲಿಸಿ ಪರಿಶೀಲಿಸಲಾಗುತ್ತಿದೆ.
ಇದಕ್ಕೂ ಮುನ್ನ ನಟ ತುಷಾರ್ ಕಪೂರ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ತಾನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನ ಸದಸ್ಯ ಹ್ಯಾರಿ ಬಾಕ್ಸರ್ ಎಂದು ಪರಿಚಯಿಸಿಕೊಂಡಿದ್ದ. ಜೀವ ಬೆದರಿಕೆ ಹಾಕಿ 5 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.
ಆದರೆ, ತುಷಾರ್ ಕಪೂರ್ ಅವರಿಗೆ ಬಂದಿರುವ ಬೆದರಿಕೆ ಕರೆ ನಕಲಿಯಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಿದ್ದಾರೆ.
ನಟ ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿಯ ವರದಿಯ ಬೆನ್ನಲ್ಲೇ ಇಬ್ಬರು ಬಾಲಿವುಡ್ ನಟರಿಗೆ ಬೆದರಿಕೆ ಸಂದೇಶಗಳು ಬಂದಿರುವುದು ಚಿತ್ರರಂಗದಲ್ಲಿ ಆತಂಕಕ್ಕೆ ಕಾರಣವಾಗಿದೆ. ಬೆದರಿಕೆಗಳ ಹಿಂದೆ ನಿಜವಾಗಿಯೂ ಬಿಷ್ಣೋಯಿ ಗ್ಯಾಂಗ್ ಕೈವಾಡವಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.