ಬೆಳಗಾವಿ, ಅ. 28: ಜಿಲ್ಲೆಯ ಕಿತ್ತೂರು ತಾಲೂಕಿನ ದೇಮಟ್ಟಿ–ಮಲ್ಲಾಪುರ ಗ್ರಾಮಗಳ ಸಮೀಪ ಟಾಟಾ ಏಸ್ ವಾಹನ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.
ಧಾರವಾಡ ತಾಲೂಕಿನ ಹೆಗ್ಗೇರಿ ಗ್ರಾಮದ ನಿವಾಸಿಗಳಾದ ಅಜಾದ್ ಜಮಾದಾರ್ (45), ಅವರ ಪತ್ನಿ ಕೈರೊನ್ ಜಮಾದಾರ್ (40) ಹಾಗೂ ಅಳಿಯ ಬಾಬಾಜಾನ್ ತಡಕೋಡ ಮೃತಪಟ್ಟ ದುರ್ದೈವಿಗಳು.
ದೇಮಟ್ಟಿ–ಮಲ್ಲಾಪುರ ಗ್ರಾಮಗಳ ನಡುವಿನ ರಸ್ತೆಯಲ್ಲಿ ಟಾಟಾ ಏಸ್ ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಅಪಘಾತದಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಒಂದೇ ಕುಟುಂಬದ ಮೂವರು ಸಾವಿಗೀಡಾಗಿರುವುದು ಕುಟುಂಬದವರಿಗೆ ಆಘಾತ ಉಂಟುಮಾಡಿದೆ.
ಅಪಘಾತದ ಕುರಿತು ಮಾಹಿತಿ ದೊರೆಯುತ್ತಿದ್ದಂತೆಯೇ ಕಿತ್ತೂರು ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತರ ಗುರುತು ಪತ್ತೆಹಚ್ಚಿದ ಬಳಿಕ ಅವರ ಮೃತದೇಹಗಳನ್ನು ಸ್ವಗ್ರಾಮಕ್ಕೆ ರವಾನಿಸಲಾಗಿದೆ ಎಂದು ವರದಿಯಾಗಿದೆ.