ಅಹಮದಾಬಾದ, ನ. 2: ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ಮೂಢನಂಬಿಕೆಯ ಹೆಸರಿನಲ್ಲಿ ತಂದೆಯೊಬ್ಬ ತನ್ನ 10 ವರ್ಷದ ಏಕೈಕ ಪುತ್ರನನ್ನೇ ದೇವತೆಯ ಪೀಠದ ಮುಂದೆ ಕೊಲೆ ಮಾಡಿ, ಬಳಿಕ ಬಾಲಕನ ಮೃತದೇಹದ ಪಕ್ಕದಲ್ಲೇ ಮಲಗಿದ್ದ ಅಮಾನವೀಯ ಘಟನೆ ನಡೆದಿದೆ.
ಅಹಮದಾಬಾದ ಜಿಲ್ಲೆಯ ಸಾಣಂದ ತಾಲೂಕಿನ ವಿಂಛಿಯಾ ಗ್ರಾಮದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಆರೋಪಿ ನರೇಶ ಪಟೇಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಬಾಲಕನನ್ನು ಕರಣ್ ಎಂದು ಗುರುತಿಸಲಾಗಿದೆ.
ಕುಟುಂಬದಲ್ಲಿ ತನ್ನ ನಂತರ ಬೇರೆ ಯಾರೂ ದೇವತೆಯ 'ಭುವಾ' ಆಗಬಾರದು ಎಂಬ ಮೂಢನಂಬಿಕೆಯಿಂದ ಮಗನನ್ನು ಬಲಿ ಕೊಟ್ಟಿರುವುದಾಗಿ ಆರೋಪಿ ತನ್ನ ಪತ್ನಿಯ ಮುಂದೆ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಜರಾತ್‌ನ ಕೆಲವು ಸಮುದಾಯಗಳಲ್ಲಿ ದೇವತೆ ಮತ್ತು ಭಕ್ತರ ನಡುವೆ ಮಧ್ಯವರ್ತಿಯಾಗಿ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳನ್ನು ನಡೆಸುವ ವ್ಯಕ್ತಿಯನ್ನು 'ಭುವಾ' ಎಂದು ಕರೆಯಲಾಗುತ್ತದೆ. ನರೇಶನ ತಂದೆ ಈ ಹಿಂದೆ ಭುವಾ ಆಗಿದ್ದು, ಅವರ ನಂತರ ನರೇಶ ಆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಎನ್ನಲಾಗಿದೆ. ತನ್ನ ನಂತರ ಕುಟುಂಬದ ಮತ್ತೊಬ್ಬರು ಆ ಸ್ಥಾನಕ್ಕೆ ಬರಬಾರದು ಎಂಬ ವಿಚಿತ್ರ ನಂಬಿಕೆಯಿಂದ ಏಕೈಕ ಮಗನನ್ನೇ ಕೊಂದಿರುವುದಾಗಿ ಆತ ಹೇಳಿಕೊಂಡಿದ್ದಾನೆ ಎಂದು ಪತ್ನಿ ದೂರಿನಲ್ಲಿ ವಿವರಿಸಿದ್ದಾರೆ.
ಆರೋಪಿ ನರೇಶ ಮತ್ತು ಪತ್ನಿ ಭಾರ್ತಿಬೆನ್ ನಡುವೆ ಕೌಟುಂಬಿಕ ಕಲಹ ನಡೆದಿತ್ತು. ಜಗಳದ ಬಳಿಕ ಭಾರ್ತಿಬೆನ್ ತವರು ಮನೆಗೆ ತೆರಳಿದ್ದರು. ಆದರೆ ಪುತ್ರ ಕರಣ್‌ನ ಶಾಲೆಯ ಕಾರಣದಿಂದ ಆತನನ್ನು ತಂದೆಯ ಬಳಿಯೇ ಬಿಟ್ಟು ಹೋಗಿದ್ದರು.
ಭಾನುವಾರ ರಾತ್ರಿ ನೆರೆಹೊರೆಯವರಿಂದ ಕರೆ ಬಂದ ಹಿನ್ನೆಲೆಯಲ್ಲಿ ಭಾರ್ತಿಬೆನ್ ಗ್ರಾಮಕ್ಕೆ ಧಾವಿಸಿದ್ದಾರೆ. ರಾತ್ರಿ ಸುಮಾರು 9.30ಕ್ಕೆ ಮನೆ ತಲುಪಿದಾಗ ಕರಣ್ ರಕ್ತದ ಮಡುವಿನಲ್ಲಿ ಮಂಚದ ಮೇಲೆ ಬಿದ್ದಿರುವುದು ಕಂಡುಬಂದಿದೆ. ಆತನ ಪಕ್ಕದಲ್ಲೇ ತಂದೆ ನರೇಶ ಮಲಗಿದ್ದು, ಆತನ ಬಟ್ಟೆಗಳ ಮೇಲೆಯೂ ರಕ್ತದ ಕಲೆಗಳಿದ್ದವು ಎಂದು ಪ್ರಥಮ ಮಾಹಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮಗನಿಗೆ ಏನಾಯಿತು ಎಂದು ಪತ್ನಿ ಪ್ರಶ್ನಿಸಿದಾಗ, ತನ್ನ ತಂದೆ ದೇವತೆಯ ಭುವಾ ಆಗಿದ್ದರು. ಅವರ ನಂತರ ತಾನು ಆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ. ಆದರೆ ತನ್ನ ನಂತರ ಕುಟುಂಬದಲ್ಲಿ ಯಾರೂ ಭುವಾ ಆಗಬಾರದು ಎಂಬ ಕಾರಣಕ್ಕೆ ಮಗನನ್ನು ಬಲಿ ಕೊಟ್ಟಿರುವುದಾಗಿ ನರೇಶ ಹೇಳಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪೊಲೀಸ್ ಇನ್‌ಸ್ಪೆಕ್ಟರ್ ಚೌಹಾಣ್ ಅವರ ಪ್ರಕಾರ, ಆರೋಪಿ ಮನೆಯಲ್ಲಿದ್ದ ದೇವತೆಯ ಸಣ್ಣ ಪೀಠದ ಬಳಿ ಮಗನನ್ನು ಕೊಲೆ ಮಾಡಿ, ನಂತರ ಮೃತದೇಹದ ಪಕ್ಕದಲ್ಲೇ ಮಲಗಿದ್ದ. ಆರೋಪಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಶಂಕೆಯನ್ನೂ ಪೊಲೀಸರು ವ್ಯಕ್ತಪಡಿಸಿದ್ದು, ಈ ಕುರಿತು ವೈದ್ಯಕೀಯ ಪರಿಶೀಲನೆಯ ವಿವರಗಳು ಲಭ್ಯವಾಗಿಲ್ಲ.
ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತಾಯಿ ಭಾರ್ತಿಬೆನ್ ನೀಡಿದ ದೂರಿನ ಆಧಾರದ ಮೇಲೆ ನರೇಶ ಪಟೇಲ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಕೊಲೆಗೆ ಮೂಢನಂಬಿಕೆಯೇ ಕಾರಣವೇ ಅಥವಾ ಕೌಟುಂಬಿಕ ಕಲಹ ಸೇರಿದಂತೆ ಬೇರೆ ಅಂಶಗಳೂ ಕಾರಣವಾಗಿವೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವೈಜ್ಞಾನಿಕ ಪ್ರಗತಿ ಮತ್ತು ಆಧುನಿಕತೆಯ ನಡುವೆಯೂ ಮೂಢನಂಬಿಕೆಯ ಹೆಸರಿನಲ್ಲಿ ತಂದೆಯೇ ತನ್ನ ಏಕೈಕ ಪುತ್ರನ ಪ್ರಾಣ ತೆಗೆದಿರುವ ಈ ಘಟನೆ ಸಮಾಜದಲ್ಲಿ ಆಳವಾಗಿ ಬೇರೂರಿರುವ ಅಂಧಶ್ರದ್ಧೆಯ ಅಪಾಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.