ರಾಯಚೂರು, ನ. 14: ಕರ್ನಾಟಕದಲ್ಲಿಯೇ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಉದ್ಯೋಗಾವಕಾಶಗಳಲ್ಲಿ ಕನ್ನಡಿಗರು ಹಿನ್ನಡೆ ಅನುಭವಿಸುತ್ತಿದ್ದಾರೆ. ಕನ್ನಡ ಭಾಷೆಯ ಅಭಿವೃದ್ಧಿಗೆ ಸರ್ಕಾರ ಆದೇಶಗಳನ್ನು ಹೊರಡಿಸಿದರೂ ಅಧಿಕಾರಿಗಳು ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತೀವ್ರ ಕಳವಳ ವ್ಯಕ್ತಪಡಿಸಿದರು.
ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಆಯೋಜಿಸಿದ್ದ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಕ್ಕೆ ಸ್ಥಳೀಯ, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಸಮಾವೇಶಗಳು ನಡೆಯಬೇಕು. ರಾಜ್ಯದಲ್ಲಿ ಸುಮಾರು 2 ಸಾವಿರ ಕನ್ನಡ ಶಾಲೆಗಳು ಕಣ್ಮರೆಯಾಗಿವೆ. ಮಕ್ಕಳ ದಾಖಲಾತಿಯೂ ಗಣನೀಯವಾಗಿ ಕುಸಿದಿದೆ. ಪರೀಕ್ಷೆಗೆ ಹಾಜರಾಗುವ 7 ಲಕ್ಷ ಮಂದಿಯಲ್ಲಿ ಅನೇಕರು ಕನ್ನಡದಲ್ಲಿಯೇ ಅನುತ್ತೀರ್ಣರಾಗುತ್ತಿದ್ದಾರೆ. ಸಂಶೋಧನಾ ಪದವಿ ಪಡೆದವರಿಗೂ ಕನ್ನಡ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದಿಸಿದರು.
ಬಂಡವಾಳ ಬರುತ್ತಿದೆ, ಕನ್ನಡಿಗರಿಗೆ ಉದ್ಯೋಗವಿಲ್ಲ
ರಾಜ್ಯಕ್ಕೆ ₹10 ಲಕ್ಷ ಕೋಟಿ ಬಂಡವಾಳ ಹರಿದುಬರಲಿದೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ. ಅದಕ್ಕೆ ಅನುಗುಣವಾಗಿ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗಬೇಕು. ಆದರೆ, ಹೊರರಾಜ್ಯಗಳಿಂದ ವಲಸೆ ಬರುವವರ ಸಂಖ್ಯೆ ಹೆಚ್ಚುತ್ತಿದ್ದು, ಕನ್ನಡಿಗರು ತಮ್ಮ ನೆಲದಲ್ಲಿಯೇ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಗ್ರೇಟರ್ ಬೆಂಗಳೂರಿನಲ್ಲಿ ಒಡಿಶಾ, ಬಿಹಾರ ಹಾಗೂ ಈಶಾನ್ಯ ರಾಜ್ಯಗಳಿಂದ ಬಂದವರ ಸಂಖ್ಯೆ ಹೆಚ್ಚಿದೆ. ಶಿವಮೊಗ್ಗದ ಅಡಿಕೆ ತೋಟಗಳಲ್ಲಿಯೂ ಕನ್ನಡಿಗರು ಕಾಣಸಿಗುತ್ತಿಲ್ಲ. ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ಸರೋಜಿನಿ ಮಹಿಷಿ ವರದಿ ಇನ್ನೂ ಅನುಷ್ಠಾನಗೊಂಡಿಲ್ಲ. ವರದಿಯಲ್ಲಿನ ಅಪ್ರಸ್ತುತ ಅಂಶಗಳನ್ನು ತೆಗೆದು ಪರಿಷ್ಕೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಬ್ಯಾಂಕ್, ಅಂಚೆ ಇಲಾಖೆ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಕಚೇರಿಗಳಲ್ಲಿಯೂ ಕನ್ನಡಿಗರಿಗೆ ಸೂಕ್ತ ಉದ್ಯೋಗಾವಕಾಶ ದೊರೆಯುತ್ತಿಲ್ಲ. ಕೇಂದ್ರದ ಕಚೇರಿಗಳಲ್ಲಿ ಕನ್ನಡ ರಾಜ್ಯೋತ್ಸವವನ್ನೂ ಆಚರಿಸುತ್ತಿಲ್ಲ. ಕನ್ನಡವಿಲ್ಲದ ಕರ್ನಾಟಕ ಬೆಳೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.
ಎಲ್ಲ ಶಾಲೆಗಳಲ್ಲೂ ಕನ್ನಡ ಮೊದಲ ಭಾಷೆಯಾಗಲಿ
ಗೋಕಾಕ ಚಳವಳಿಗೂ ಮುನ್ನ ಇದ್ದ ಭಾಷಾ ಸಮಸ್ಯೆಗಳು ಮತ್ತೆ ತಲೆದೋರುತ್ತಿವೆ. ಕರ್ನಾಟಕದ ಯಾವುದೇ ಮಾಧ್ಯಮದ ಶಾಲೆಯಲ್ಲಾದರೂ ಕನ್ನಡ ಮೊದಲ ಭಾಷೆಯಾಗಬೇಕು. ಆದರೆ, ಕೇಂದ್ರ ಪ್ರೌಢಶಿಕ್ಷಣ ಮಂಡಳಿಗೆ ಒಳಪಟ್ಟ ಶಾಲೆಗಳು ಇದನ್ನು ಪಾಲಿಸುತ್ತಿಲ್ಲ. ಕನ್ನಡವನ್ನು ಕಡೆಗಣಿಸುವ ಶಾಲೆಗಳ ಅನುಮತಿ ರದ್ದುಪಡಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಹಿಂದಿ ಭಾಷೆಯ ಬೆಳವಣಿಗೆ ಶೇ 66ರಷ್ಟಿದ್ದರೆ, ಮರಾಠಿ ಮತ್ತು ಪಂಜಾಬಿ ಭಾಷೆಗಳ ಬೆಳವಣಿಗೆ ಶೇ 9.5ರಷ್ಟಿದೆ. ಕನ್ನಡದ ಬೆಳವಣಿಗೆ ಕೇವಲ ಶೇ 3.7ರಷ್ಟಿದೆ. ಕನ್ನಡ ಅಧ್ಯಯನ ಪೀಠಗಳು ಜಾಗತಿಕ ಮಟ್ಟದಲ್ಲಿ ಆರಂಭವಾಗಬೇಕಾದ ಸಂದರ್ಭದಲ್ಲಿ ರಾಜ್ಯದಲ್ಲಿರುವ ಪೀಠಗಳೇ ಮುಚ್ಚುತ್ತಿರುವುದು ದುರದೃಷ್ಟಕರ ಎಂದರು.
ಅಂತರರಾಷ್ಟ್ರೀಯ ಮಾರುಕಟ್ಟೆಯೊಂದಿಗೆ ಸಂಪರ್ಕ ಸಾಧಿಸಲು ಇಂಗ್ಲಿಷ್ ಅಗತ್ಯ. ಆದರೆ, ಅದಕ್ಕಾಗಿ ಕನ್ನಡವನ್ನು ಕಡೆಗಣಿಸಬಾರದು. ಕರ್ನಾಟಕದಲ್ಲಿ ಸುಮಾರು 290 ಭಾಷೆಗಳಿದ್ದು, ಬಹುಭಾಷಿಕ ಪರಿಸರದಲ್ಲಿ ಕನ್ನಡದ ಅಸ್ತಿತ್ವ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ ಎಂದು ಅಭಿಪ್ರಾಯಪಟ್ಟರು.
ಪಂಪ, ರನ್ನ, ಶಾಂತರಸರಂತಹ ಮಹನೀಯರು ಬೆಳೆಸಿದ ಕನ್ನಡ ಭಾಷೆಯನ್ನು ಉಳಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಸಾಹಿತ್ಯ ಸಮ್ಮೇಳನಗಳು ಕೇವಲ ಭಾಷಣಗಳಿಗೆ ಸೀಮಿತವಾಗದೆ, ಕನ್ನಡದ ಪರವಾಗಿ ಆಡಳಿತ ವ್ಯವಸ್ಥೆಯ ಮೇಲೆ ಒತ್ತಡ ಹೇರುವ ವೇದಿಕೆಗಳಾಗಬೇಕು. ಇಂಗ್ಲಿಷ್ ಪ್ರಭಾವಕ್ಕೆ ಒಳಗಾಗಿ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡವನ್ನು ಕಡೆಗಣಿಸುವುದು ಅದರ ಕತ್ತು ಹಿಸುಕಿದಂತಾಗುತ್ತದೆ ಎಂದು ಬಿಳಿಮಲೆ ಎಚ್ಚರಿಸಿದರು.