LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಬೆಳಗಾವಿಯಲ್ಲಿ 510 ಕೆಡೆಟ್‌ಗಳ ಅಖಿಲ ಭಾರತ ಎನ್‌ಸಿಸಿ ಶಿಬಿರಕ್ಕೆ ಚಾಲನೆ

ಬೆಳಗಾವಿ, ನ. 16: ದೇಶದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಆಗಮಿಸಿರುವ 510 ಎನ್‌ಸಿಸಿ ಕೆಡೆಟ್‌ಗಳನ್ನು ಒಳಗೊಂಡ ಅಖಿಲ ಭಾರತ ಚಾರಣ ಶಿಬಿರಕ್ಕೆ ಭಾನುವಾರ ಬೆಳಗಾವಿಯಲ್ಲಿ ಚಾಲನೆ ನೀಡಲಾಯಿತು.

26ನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಆಶ್ರಯದಲ್ಲಿ ನಗರದ ಜಾಧವ ನಗರದಲ್ಲಿ ನ. 15ರಿಂದ 22ರವರೆಗೆ ಎಂಟು ದಿನಗಳ ಶಿಬಿರ ಆಯೋಜಿಸಲಾಗಿದೆ. ಕರ್ನಾಟಕ, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ, ತಮಿಳುನಾಡು, ಕೇರಳ ಹಾಗೂ ಲಕ್ಷದ್ವೀಪಗಳಿಂದ ಕೆಡೆಟ್‌ಗಳು ಭಾಗವಹಿಸಿದ್ದಾರೆ.

ಶಿಬಿರದ ಅಂಗವಾಗಿ ಕೆಡೆಟ್‌ಗಳು ಬೆಳಗಾವಿ ಗಡಿ ಭಾಗದ ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶಗಳಲ್ಲಿ ಚಾರಣ ಕೈಗೊಳ್ಳಲಿದ್ದಾರೆ. ಯುವಜನರಲ್ಲಿ ಸಾಹಸ ಮನೋಭಾವ, ದೈಹಿಕ ಸಾಮರ್ಥ್ಯ, ನಾಯಕತ್ವ ಗುಣ, ಶಿಸ್ತು ಹಾಗೂ ರಾಷ್ಟ್ರೀಯ ಏಕತೆಯ ಭಾವನೆ ಬೆಳೆಸುವುದು ಶಿಬಿರದ ಪ್ರಮುಖ ಉದ್ದೇಶವಾಗಿದೆ.

ಶಿಬಿರ ಉದ್ಘಾಟಿಸಿದ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟಲ್ ಸೆಂಟರ್‌ನ ಕಮಾಂಡೆಂಟ್, ಸೇನಾ ಪದಕ ಹಾಗೂ ವಿಶಿಷ್ಟ ಸೇವಾ ಪದಕ ಪುರಸ್ಕೃತ ಬ್ರಿಗೇಡಿಯರ್ ಗಿರೀಶ ಉಪಾಧ್ಯಾಯ ಮಾತನಾಡಿ, ಚಾರಣ ಚಟುವಟಿಕೆಗಳು ಯುವಜನರಲ್ಲಿ ದೈಹಿಕ ಸಹಿಷ್ಣುತೆ, ಮಾನಸಿಕ ದೃಢತೆ, ಆತ್ಮವಿಶ್ವಾಸ ಹಾಗೂ ನಾಯಕತ್ವ ಕೌಶಲಗಳನ್ನು ಬೆಳೆಸುತ್ತವೆ ಎಂದರು.

ಪ್ರತಿದಿನ 10ರಿಂದ 15 ಕಿ.ಮೀ. ಚಾರಣ ಮಾಡುವುದರಿಂದ ಕೆಡೆಟ್‌ಗಳು ಕ್ರಮೇಣ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ವೃದ್ಧಿಸಿಕೊಳ್ಳಬಹುದು. ಇದರಿಂದ ಮುಂದಿನ ದಿನಗಳಲ್ಲಿ 50 ಕಿ.ಮೀ.ವರೆಗಿನ ದೀರ್ಘ ಚಾರಣ ಕೈಗೊಳ್ಳಲು ಅಗತ್ಯ ಸಿದ್ಧತೆ ಸಾಧ್ಯವಾಗಲಿದೆ. ಚಾರಣವು ಶಿಸ್ತು, ತಾಳ್ಮೆ, ತಂಡದ ಮನೋಭಾವ ಹಾಗೂ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನೂ ಬೆಳೆಸುತ್ತದೆ ಎಂದು ತಿಳಿಸಿದರು.

ವಿವಿಧ ರಾಜ್ಯಗಳ ಕೆಡೆಟ್‌ಗಳು ಒಂದೇ ವೇದಿಕೆಯಲ್ಲಿ ಸೇರಿರುವುದರಿಂದ ಪರಸ್ಪರ ಭಾಷೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಜೀವನಶೈಲಿಯನ್ನು ಅರಿಯಲು ಉತ್ತಮ ಅವಕಾಶ ದೊರೆಯಲಿದೆ. ಇಂತಹ ಶಿಬಿರಗಳು ರಾಷ್ಟ್ರೀಯ ಏಕತೆ, ಸಹೋದರತ್ವ ಮತ್ತು ಪರಸ್ಪರ ಸಹಕಾರದ ಮನೋಭಾವವನ್ನು ಬಲಪಡಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಮಟ್ಟದ ಶಿಬಿರ ಆಯೋಜಿಸಿರುವ ಬೆಳಗಾವಿ ಎನ್‌ಸಿಸಿ ಗ್ರೂಪ್ ಮುಖ್ಯಸ್ಥರ ಕಚೇರಿ ಹಾಗೂ 26ನೇ ಕರ್ನಾಟಕ ಬೆಟಾಲಿಯನ್‌ನ ಪ್ರಯತ್ನವನ್ನು ಶ್ಲಾಘಿಸಿದ ಅವರು, ಶಿಬಿರಾರ್ಥಿಗಳು ಚಾರಣದ ಉದ್ದಕ್ಕೂ ಶಿಸ್ತು, ಸುರಕ್ಷತೆ ಹಾಗೂ ತಂಡದ ಮನೋಭಾವ ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಬೆಳಗಾವಿ ಎನ್‌ಸಿಸಿ ಗ್ರೂಪ್ ಕಮಾಂಡರ್ ಕರ್ನಲ್ ಸಿ. ರಾಜಶೇಖರ ಅವರು ಬ್ರಿಗೇಡಿಯರ್ ಗಿರೀಶ ಉಪಾಧ್ಯಾಯ ಅವರನ್ನು ಸ್ಮರಣಿಕೆ ನೀಡಿ ಗೌರವಿಸಿದರು.

26ನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಕಮಾಂಡಿಂಗ್ ಅಧಿಕಾರಿ ಕರ್ನಲ್ ಸುನಿಲ್ ದಾಗರ್, ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಎಸ್. ರೆಡ್ಡೂ (ಸೇನಾ ಪದಕ), ಸುಬೇದಾರ್ ಮೇಜರ್ ಕಲ್ಲಪ್ಪ ಪಾಟೀಲ, ಎನ್‌ಸಿಸಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕೆಡೆಟ್‌ಗಳು ಉಪಸ್ಥಿತರಿದ್ದರು.

ಬಳಿಕ ಬ್ರಿಗೇಡಿಯರ್ ಗಿರೀಶ ಉಪಾಧ್ಯಾಯ ಹಸಿರು ನಿಶಾನೆ ತೋರುವ ಮೂಲಕ ಚಾರಣಕ್ಕೆ ಚಾಲನೆ ನೀಡಿದರು. ವಿವಿಧ ರಾಜ್ಯಗಳ ಕೆಡೆಟ್‌ಗಳು ಉತ್ಸಾಹದಿಂದ ಪಶ್ಚಿಮ ಘಟ್ಟಗಳ ಪ್ರಕೃತಿ ಸೌಂದರ್ಯದ ನಡುವೆ ಚಾರಣ ಆರಂಭಿಸಿದರು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST