ಹೊಸದಿಲ್ಲಿ, ಆಗಸ್ಟ್ 29: ನ್ಯಾಯಾಧೀಶರ ನೇಮಕಾತಿಯಲ್ಲಿ ಸ್ವಾತಂತ್ರ್ಯವನ್ನು ಖಚಿತಪಡಿಸುವಲ್ಲಿ ಕೊಲಿಜಿಯಂ ವ್ಯವಸ್ಥೆ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ ಎಂಬುದನ್ನು ಹಿರಿಯ ವಕೀಲ ಹಾಗೂ ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಡಾ. ಎಸ್. ಮುರಳೀಧರ ಕಟುವಾಗಿ ಪ್ರಶ್ನಿಸಿದ್ದಾರೆ. ಕಳೆದ 12 ವರ್ಷಗಳಲ್ಲಿ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕಾರ್ಯಾಂಗದಿಂದ ವಿವರಿಸಲಾಗದ ಹಸ್ತಕ್ಷೇಪ ನಡೆದಿದೆ ಎಂದು ಆರೋಪಿಸಿದ ಅವರು, ಕೊಲಿಜಿಯಂ ವ್ಯವಸ್ಥೆಯಲ್ಲಿರುವ ಪಾರದರ್ಶಕತೆಯ ಕೊರತೆ ಮತ್ತು ಅಸ್ಪಷ್ಟತೆಯನ್ನು ಟೀಕಿಸಿದರು.
‘2047ರಲ್ಲಿ ಭಾರತದ ಮುನ್ನೋಟ’ ವಿಷಯದ ಕುರಿತು 28ನೇ ಡಿ.ಎಸ್. ಬೋರ್ಕರ್ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ ಮುರಳೀಧರ, ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯಲ್ಲಿನ ಹಲವು ಲೋಪಗಳನ್ನು ಪ್ರಸ್ತಾಪಿಸಿದರು.
ಖಾಲಿ ಹುದ್ದೆಗಳ ಹೆಚ್ಚಳಕ್ಕೆ ನೇಮಕಾತಿ ಪ್ರಕ್ರಿಯೆಯಲ್ಲಿನ ವಿಳಂಬವೇ ಕಾರಣ
ನ್ಯಾಯಾಧೀಶರ ನಿವೃತ್ತಿ ದಿನಾಂಕಗಳು ಮೊದಲೇ ತಿಳಿದಿದ್ದರೂ, ಅವರ ಸ್ಥಾನಕ್ಕೆ ಸಕಾಲದಲ್ಲಿ ಹೊಸ ನ್ಯಾಯಾಧೀಶರನ್ನು ನೇಮಿಸಲು ಕೊಲಿಜಿಯಂ ವ್ಯವಸ್ಥೆಗೆ ಸಾಧ್ಯವಾಗುತ್ತಿಲ್ಲ ಎಂದು ಮುರಳೀಧರ ಹೇಳಿದರು. ನೇಮಕಾತಿ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿ ಹಾಗೂ ದಕ್ಷಗೊಳಿಸದೆ ಕೇವಲ ನ್ಯಾಯಾಧೀಶರ ಮಂಜೂರಾದ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸುವುದರಿಂದ ನ್ಯಾಯಾಲಯಗಳಲ್ಲಿನ ಖಾಲಿ ಹುದ್ದೆಗಳ ಸಮಸ್ಯೆ ಮತ್ತಷ್ಟು ಗಂಭೀರವಾಗಲಿದೆ ಎಂದು ಅವರು ಎಚ್ಚರಿಸಿದರು.
ಪ್ರಕರಣಗಳ ವಿಳಂಬ ಮತ್ತು ಬಾಕಿ ಪ್ರಕರಣಗಳ ಕುರಿತು ಮಾತನಾಡಿದ ಅವರು, ಬಾಕಿ ಪ್ರಕರಣಗಳನ್ನು ನಿಭಾಯಿಸಲು ನ್ಯಾಯಾಧೀಶರು ತಮ್ಮ ಕೈಲಾದಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ಅಂಕಿಅಂಶಗಳು ತೋರಿಸುತ್ತವೆ ಎಂದರು.
ನ್ಯಾಯಾಲಯಗಳಲ್ಲಿ ಶೇ.90ಕ್ಕಿಂತ ಹೆಚ್ಚಿನ ಪ್ರಕರಣಗಳ ವಿಲೇವಾರಿ ದರ ಇದೆ. ಕೆಲವರು ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿಸುತ್ತಿದ್ದರೂ, ಹೆಚ್ಚಿನ ಸಂಖ್ಯೆಯ ಪ್ರಾಮಾಣಿಕ ಮತ್ತು ಕಷ್ಟಪಟ್ಟು ಕೆಲಸ ಮಾಡುವ ನ್ಯಾಯಾಧೀಶರಿಂದಾಗಿ ನ್ಯಾಯಾಲಯಗಳ ಒಟ್ಟಾರೆ ಕೆಲಸದ ಹೊರೆ ನಿರ್ವಹಣೆಯಾಗುತ್ತಿದೆ ಎಂದು ಅವರು ಹೇಳಿದರು.
ಸರಕಾರಗಳ ಕ್ರಮಗಳಿಂದ ನ್ಯಾಯಾಲಯಗಳ ಮೇಲಿನ ಹೊರೆ ಹೆಚ್ಚಳ
ಪ್ರಕರಣಗಳು ಬಾಕಿ ಉಳಿಯುವುದಕ್ಕೆ ಕೇವಲ ನ್ಯಾಯಾಧೀಶರನ್ನು ಹೊಣೆಗಾರರನ್ನಾಗಿ ಮಾಡಲಾಗದು ಎಂದು ಮುರಳೀಧರ ಹೇಳಿದರು. ಪ್ರತಿ ತಿಂಗಳು ಜಿಲ್ಲಾ ಮಟ್ಟದ ನ್ಯಾಯಾಲಯಗಳಲ್ಲಿ ಸುಮಾರು 29 ಲಕ್ಷ ಪ್ರಕರಣಗಳು ದಾಖಲಾಗುತ್ತಿದ್ದು, 24 ಲಕ್ಷ ಪ್ರಕರಣಗಳು ವಿಲೇವಾರಿಯಾಗುತ್ತಿವೆ. ಹೈಕೋರ್ಟ್‌ಗಳಲ್ಲಿ ವರ್ಷಕ್ಕೆ 10 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿದ್ದು, ಸರಿಸುಮಾರು ಅಷ್ಟೇ ಸಂಖ್ಯೆಯ ಪ್ರಕರಣಗಳು ವಿಲೇವಾರಿಯಾಗುತ್ತಿವೆ. ಹೀಗಾಗಿ ಒಟ್ಟು ಬಾಕಿ ಪ್ರಕರಣಗಳ ಸಂಖ್ಯೆ ಬಹುತೇಕ ಯಥಾಸ್ಥಿತಿಯಲ್ಲೇ ಉಳಿಯುತ್ತಿದೆ ಎಂದರು.
2025ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸುಮಾರು 62,000 ಪ್ರಕರಣಗಳು ದಾಖಲಾಗಿದ್ದು, ಸುಮಾರು 57,000 ಪ್ರಕರಣಗಳು ವಿಲೇವಾರಿಯಾಗಿವೆ ಎಂದು ಅವರು ಮಾಹಿತಿ ನೀಡಿದರು.
ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆ ಸೇರಿದಂತೆ ಸಾಮಾನ್ಯ ಚಟುವಟಿಕೆಗಳನ್ನು ಅಪರಾಧೀಕರಿಸುವುದು ಮತ್ತು ಅನಗತ್ಯ ಬಂಧನಗಳನ್ನು ನಡೆಸುವುದರಿಂದ ಸರಕಾರಗಳು ಜನರು ನ್ಯಾಯಾಲಯದ ಮೊರೆ ಹೋಗುವ ಪರಿಸ್ಥಿತಿಯನ್ನು ಸೃಷ್ಟಿಸುತ್ತಿವೆ ಎಂದು ಮುರಳೀಧರ ಆರೋಪಿಸಿದರು.
ಸರಕಾರವು ತನ್ನ ವಿರುದ್ಧ ತೀರ್ಪು ಬಂದ ಬಹುತೇಕ ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯದವರೆಗೆ ಮೇಲ್ಮನವಿ ಸಲ್ಲಿಸುತ್ತಿದೆ. ಖಾಸಗಿ ವ್ಯಕ್ತಿಗಳು ಪ್ರಕರಣದಲ್ಲಿ ಗೆದ್ದರೂ, ಸರಕಾರಗಳು ನ್ಯಾಯಾಲಯದ ಆದೇಶಗಳನ್ನು ಪಾಲಿಸುತ್ತವೆ ಎಂಬ ಖಾತರಿ ಇರುವುದಿಲ್ಲ ಎಂದು ಅವರು ಟೀಕಿಸಿದರು.
ಸರಕಾರಿ ವಕೀಲರಿಗೆ ಅಗತ್ಯವಾದ ಪರಿಣತಿಯ ಕೊರತೆ ಇರುವುದು ಮತ್ತು ಅವರಿಗೆ ಸರಕಾರದಿಂದ ಸಮರ್ಪಕ ಸೂಚನೆಗಳು ದೊರೆಯದಿರುವುದು ಕೂಡ ಪ್ರಕರಣಗಳ ವಿಳಂಬಕ್ಕೆ ಕಾರಣವಾಗುತ್ತಿದೆ. ಪದೇಪದೇ ಮುಂದೂಡಿಕೆಗಳನ್ನು ಕೋರುವುದರಿಂದ ನ್ಯಾಯಾಂಗ ಪ್ರಕ್ರಿಯೆ ಮತ್ತಷ್ಟು ನಿಧಾನಗೊಳ್ಳುತ್ತಿದೆ ಎಂದು ಮುರಳೀಧರ ಹೇಳಿದರು.