ಇಟಾವ, ಆಗಸ್ಟ 29: ದೇಶ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆ ಬಿಜೆಪಿ ಆಗಿದ್ದು, ದ್ವೇಷ ಹರಡುವುದನ್ನು ಹೊರತುಪಡಿಸಿ ಆಡಳಿತಾರೂಢ ಬಿಜೆಪಿಗೆ ಬೇರೆ ಯಾವುದೇ ಕಾರ್ಯಸೂಚಿಯಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ ಶುಕ್ರವಾರ ವಾಗ್ದಾಳಿ ನಡೆಸಿದರು.
ರಕ್ಷಾ ಬಂಧನದ ಅಂಗವಾಗಿ ಉತ್ತರ ಪ್ರದೇಶದ ಇಟಾವ ಜಿಲ್ಲೆಯ ತಮ್ಮ ತವರು ಗ್ರಾಮ ಸೈಫೈಗೆ ಭೇಟಿ ನೀಡಿದ್ದ ಅಖಿಲೇಶ ಯಾದವ, ಸುದ್ದಿಗಾರರೊಂದಿಗೆ ಮಾತನಾಡಿ ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
“ದೇಶದಲ್ಲಿ ಒಂದೇ ಒಂದು ದೊಡ್ಡ ಸಮಸ್ಯೆ ಇದೆ. ಅದು ಬಿಜೆಪಿ. ಬಿಜೆಪಿಯೇ ಅತಿ ದೊಡ್ಡ ಸಮಸ್ಯೆಯಾಗಿದ್ದು, ಅದು ಅಧಿಕಾರದಿಂದ ನಿರ್ಗಮಿಸಿದರೆ ಸಮಸ್ಯೆಯೂ ಇಲ್ಲವಾಗುತ್ತದೆ” ಎಂದು ಅವರು ಹೇಳಿದರು.
ಬಿಜೆಪಿಗೆ ದ್ವೇಷ ಹರಡುವುದನ್ನು ಹೊರತುಪಡಿಸಿ ಬೇರೆ ಯಾವುದೇ ಕಾರ್ಯಸೂಚಿಯಿಲ್ಲ ಎಂದು ಆರೋಪಿಸಿದ ಅಖಿಲೇಶ ಯಾದವ, ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ಅವರ ಪರಂಪರೆಯನ್ನು ಬಿಜೆಪಿ ಮಾರಾಟ ಮಾಡುತ್ತಿದೆ ಎಂದು ಟೀಕಿಸಿದರು.
“ಬಿಜೆಪಿ ಸ್ಥಾಪನೆಯಾದ ಸಂದರ್ಭದಲ್ಲಿ ತನ್ನನ್ನು ಸಮಾಜವಾದಿ ಪಕ್ಷ ಎಂದು ಬಿಂಬಿಸಿಕೊಳ್ಳಲು ಜಯಪ್ರಕಾಶ್ ನಾರಾಯಣ್ ಅವರ ಭಾವಚಿತ್ರವನ್ನು ಬಳಸಿಕೊಂಡಿತ್ತು. ಆದರೆ, ಇದೀಗ ಜಯಪ್ರಕಾಶ್ ನಾರಾಯಣ್ ಅಂತಾರಾಷ್ಟ್ರೀಯ ಸಮ್ಮೇಳನ ಕೇಂದ್ರವನ್ನು ಮಾರಾಟ ಮಾಡಿದೆ” ಎಂದು ಅವರು ಆರೋಪಿಸಿದರು.
“ಬಿಜೆಪಿಯನ್ನು ಖರೀದಿಸಲು ಯಾರೂ ಬಯಸುತ್ತಿಲ್ಲ. ಇಲ್ಲದಿದ್ದರೆ ಅದು ತನ್ನನ್ನೇ ಮಾರಾಟ ಮಾಡಿಕೊಳ್ಳುತ್ತಿತ್ತು” ಎಂದು ಅಖಿಲೇಶ ಯಾದವ ವ್ಯಂಗ್ಯವಾಡಿದರು.
ಬೆಲೆ ಏರಿಕೆಗೆ ಬಿಜೆಪಿ ಹೊಣೆ: ಅಖಿಲೇಶ
ಉದ್ಯಮಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಬಿಜೆಪಿ ನೇತೃತ್ವದ ಸರಕಾರ ಅಗತ್ಯ ವಸ್ತುಗಳು ಮತ್ತು ಇಂಧನದ ಬೆಲೆ ಏರಿಕೆಗೆ ಅವಕಾಶ ಮಾಡಿಕೊಡುತ್ತಿದೆ ಎಂದು ಅಖಿಲೇಶ ಯಾದವ ಆರೋಪಿಸಿದರು. ಜನಸಾಮಾನ್ಯರ ಮೇಲಿನ ಬೆಲೆ ಏರಿಕೆಯ ಹೊರೆಯನ್ನು ಕಡಿಮೆ ಮಾಡುವ ಬದಲು ಸರಕಾರವು ಉದ್ಯಮಿಗಳ ಹಿತಾಸಕ್ತಿಗೆ ಆದ್ಯತೆ ನೀಡುತ್ತಿದೆ ಎಂದು ಅವರು ದೂರಿದರು.