LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Crime News

ಆಸ್ತಿ ಹಂಚಿಕೆ ವಿವಾದ: ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಮಾಜಿ ಯೋಧ, ವಕೀಲ ಪುತ್ರಿಯ ಬರ್ಬರ ಹತ್ಯೆ

ಚನ್ನಮ್ಮನ ಕಿತ್ತೂರು, ಸೆ. 16 : ಆಸ್ತಿ ಹಂಚಿಕೆ ವಿಚಾರವಾಗಿ ಹಲವು ದಿನಗಳಿಂದ ನಡೆಯುತ್ತಿದ್ದ ಕುಟುಂಬದೊಳಗಿನ ವಿವಾದ ಕೊನೆಗೆ ತಂದೆ-ಮಗಳ ಬರ್ಬರ ಹತ್ಯೆಯಲ್ಲಿ ಅಂತ್ಯವಾಗಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಮಾಜಿ ಯೋಧ ರುದ್ರಪ್ಪ ಕುಂದರಗಿ (67) ಹಾಗೂ ಅವರ ಪುತ್ರಿ, ಕಾನೂನು ಪದವೀಧರೆ ಶಶಿಕಲಾ ಕುಂದರಗಿ (26) ಅವರನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ.

ರುದ್ರಪ್ಪ ಕುಂದರಗಿ ಹಾಗೂ ಅವರ ಸಹೋದರರಾದ ಬಸಪ್ಪ ಕುಂದರಗಿ ಮತ್ತು ಸಂಗಪ್ಪ ಕುಂದರಗಿ ನಡುವೆ ಹಲವು ದಿನಗಳಿಂದ ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ವಿವಾದ ನಡೆಯುತ್ತಿತ್ತು. ಒಟ್ಟು 38 ಗುಂಟೆ ಆಸ್ತಿಯನ್ನು ಮೂವರು ಸಹೋದರರಿಗೆ ಸಮಾನವಾಗಿ ಹಂಚಿಕೆ ಮಾಡುವಂತೆ ನ್ಯಾಯಾಲಯ ಆದೇಶಿಸಿತ್ತು ಎಂದು ವರದಿಯಾಗಿದೆ. ಆದರೆ, ರುದ್ರಪ್ಪ ಅವರಿಗೆ ಬಂದ ಪಾಲಿನ ಜಮೀನನ್ನು ಅವರು ಈಗಾಗಲೇ ಮಾರಾಟ ಮಾಡಿದ್ದರೂ, ಉಳಿದ ಜಮೀನಿನಲ್ಲಿಯೂ ಪಾಲು ಕೇಳುತ್ತಿದ್ದರು ಎನ್ನಲಾಗಿದೆ. ಇಡೀ ಆಸ್ತಿ ರುದ್ರಪ್ಪ ಅವರ ಹೆಸರಿನಲ್ಲಿದ್ದ ಕಾರಣ ಸಹೋದರರ ನಡುವೆ ವಿವಾದ ಮುಂದುವರಿದಿತ್ತು ಎಂದು ವರದಿಗಳು ತಿಳಿಸಿವೆ.

ಆಸ್ತಿ ಪಾಲುದಾರಿಕೆಯ ದಾಖಲಾತಿಗೆ ಅರ್ಜಿ ಸಲ್ಲಿಸುವ ಉದ್ದೇಶದಿಂದ ರುದ್ರಪ್ಪ ಅವರು ಪುತ್ರಿ ಶಶಿಕಲಾ ಅವರೊಂದಿಗೆ ಧಾರವಾಡದಿಂದ ಬಾಡಿಗೆ ಕಾರಿನಲ್ಲಿ ಬುಧವಾರ ಅವರಾದಿ ಗ್ರಾಮಕ್ಕೆ ಬಂದಿದ್ದರು. ಬಳಿಕ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿದ್ದರು. ಅವರು ಗ್ರಾಮಕ್ಕೆ ಬಂದಿರುವ ವಿಷಯ ತಿಳಿದ ರುದ್ರಪ್ಪ ಅವರ ಸಹೋದರರಾದ ಬಸಪ್ಪ ಕುಂದರಗಿ, ಸಂಗಪ್ಪ ಕುಂದರಗಿ ಹಾಗೂ ಸಂಗಪ್ಪ ಅವರ ಪುತ್ರ ಮಡಿವಾಳಪ್ಪ ಕುಂದರಗಿ ಗ್ರಾಮ ಪಂಚಾಯಿತಿ ಕಚೇರಿಗೆ ಬಂದಿದ್ದಾರೆ.

ಈ ವೇಳೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ರುದ್ರಪ್ಪ ಅವರ ಮೇಲೆ ಕೊಡಲಿ, ಕುಡಗೋಲು ಸೇರಿದಂತೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ರುದ್ರಪ್ಪ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.

ತಂದೆಯ ಮೇಲೆ ದಾಳಿ ನಡೆಯುತ್ತಿರುವುದನ್ನು ಕಂಡ ಶಶಿಕಲಾ ಅವರನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಶಶಿಕಲಾ ಅವರ ಮೇಲೂ ಆರೋಪಿಗಳು ದಾಳಿ ನಡೆಸಿದ್ದಾರೆ. ಶಶಿಕಲಾ ಅವರ ಜಡೆಯನ್ನು ಕತ್ತರಿಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ. ತೀವ್ರವಾಗಿ ಗಾಯಗೊಂಡ ತಂದೆ ಮತ್ತು ಮಗಳು ಮೃತಪಟ್ಟಿದ್ದಾರೆ.

ಘಟನೆ ವೇಳೆ ತಂದೆ-ಮಗಳೊಂದಿಗೆ ಕಾರಿನಲ್ಲಿ ಬಂದಿದ್ದ ರಾಹುಲ್ ಲೋಬೊ ಅವರ ಮೇಲೂ ದಾಳಿ ನಡೆದಿದೆ. ರಾಹುಲ್ ಧಾರವಾಡದ ಶಿವಗಿರಿ ನಗರದ ನಿವಾಸಿಯಾಗಿದ್ದು, ಶಶಿಕಲಾ ಅವರ ಗೆಳೆಯ ಎಂದು ವರದಿಯಾಗಿದೆ. ತೀವ್ರವಾಗಿ ಗಾಯಗೊಂಡ ಅವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಹಾಡಹಗಲೇ ನಡೆದ ಜೋಡಿ ಕೊಲೆ ಅವರಾದಿ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಘಟನೆ ಬಳಿಕ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಕೋ ತಜ್ಞರ ತಂಡವೂ ಸ್ಥಳಕ್ಕೆ ಆಗಮಿಸಿ ಮಹಜರು ಪ್ರಕ್ರಿಯೆ ನಡೆಸಿದೆ.

ಘಟನೆ ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸಪ್ಪ ಕುಂದರಗಿ, ಸಂಗಪ್ಪ ಕುಂದರಗಿ ಹಾಗೂ ಮಡಿವಾಳಪ್ಪ ಕುಂದರಗಿ ವಿರುದ್ಧ ದಾಳಿ ನಡೆಸಿದ ಆರೋಪ ಕೇಳಿಬಂದಿದ್ದು, ಘಟನೆ ಬಳಿಕ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಕ್ರಮ ವಹಿಸಿ: ಡಾ. ಜಿ. ಪರಮೇಶ್ವರಶಿಸ್ತು, ಜಾಗೃತಿಯಿಂದ ಗಣೇಶೋತ್ಸವ ಆಚರಿಸಿ: ಮೇಯರ್ ಪ್ರೀತಿ ಕಾಮಕರ್ಆಸ್ತಿ ಹಂಚಿಕೆ ವಿವಾದ: ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಮಾಜಿ ಯೋಧ, ವಕೀಲ ಪುತ್ರಿಯ ಬರ್ಬರ ಹತ್ಯೆಯುಪಿಐ ಶುಲ್ಕ ಜನರ ಜೇಬಿನ ಮೇಲೆ ‘ಸರ್ಜಿಕಲ್ ಸ್ಟ್ರೈಕ್’: ಸಚಿವ ಶಿವರಾಜ ತಂಗಡಗಿ ಟೀಕೆ‘ವಂದೇ ಮಾತರಂ’ ಪೂರ್ಣ ಹಾಡಿದರೆ ರಾಜೀನಾಮೆ: ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ಸವಾಲುರೈಲ್ವೆ ಯೋಜನೆಗೆ ಭೂಸ್ವಾಧೀನ: ಎಕರೆಗೆ ₹1 ಕೋಟಿ ಪರಿಹಾರಕ್ಕೆ ರೈತರ ಆಗ್ರಹಲಾಡ್ಜನಲ್ಲಿ ಯುವತಿ ಅನುಮಾನಾಸ್ಪದ ಸಾವು₹2 ಸಾವಿರಕ್ಕಿಂತ ಹೆಚ್ಚಿನ ಯುಪಿಐ ವ್ಯಾಪಾರಿ ಪಾವತಿಗೆ ಶೇ 0.4 ಎಂಡಿಆರ್ರಾಸಾಯನಿಕ ಮಿಶ್ರಿತ ಬಣ್ಣದ ಅಡಿಕೆ ಅಕ್ರಮ ಸಾಗಣೆ; ಕಂಟೈನರ್ ಜಪ್ತಿ, ಇಬ್ಬರು ವಶಕ್ಕೆಮಣಿಪುರದಲ್ಲಿ ಮತ್ತೆ ಹಿಂಸಾಚಾರ: ನಾಗಾ ಗ್ರಾಮದ ಮೇಲೆ ಉಗ್ರರ ದಾಳಿ, ಎರಡು ಮನೆಗಳಿಗೆ ಬೆಂಕಿ