ಬೆಂಗಳೂರು, ನ. 2: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಜಾತಿ ಬಲದಿಂದಲೇ ಮುಖ್ಯಮಂತ್ರಿಯಾಗಿದ್ದರು. ನಾನು ಕೂಡ ಎಲ್ಲವನ್ನೂ ಬದಿಗಿಟ್ಟು ರಾಜಕೀಯ ಹೋರಾಟಕ್ಕೆ ಇಳಿದರೆ ಅವರಿಗೆ ಕಷ್ಟವಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಕಾರ್ಯಾಚರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಮತ್ತು ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರ ಸೋಮವಾರ ಮತ್ತಷ್ಟು ತೀವ್ರಗೊಂಡಿದೆ.
ಕುಮಾರಸ್ವಾಮಿ ಬಳಿ ಯಾವುದೇ ಸಾಕ್ಷ್ಯಗಳಿದ್ದರೆ ಬಹಿರಂಗಪಡಿಸಲಿ. ಆಧಾರರಹಿತ ಆರೋಪಗಳನ್ನು ಮಾಡಿ ತಪ್ಪಿಸಿಕೊಳ್ಳುವ ಪ್ರವೃತ್ತಿ ಬಿಡಬೇಕು. ಪ್ರಕರಣದ ಎಲ್ಲ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿರುವಾಗ ಕೇಂದ್ರ ಸಚಿವರಿಗೆ ಇಷ್ಟೊಂದು ಆತುರ ಏಕೆ ಎಂದು ಪ್ರಿಯಾಂಕ್ ಪ್ರಶ್ನಿಸಿದರು.
ಪ್ರಜ್ವಲ ರೇವಣ್ಣ ಪ್ರಕರಣದಲ್ಲಿಯೂ ಕುಮಾರಸ್ವಾಮಿ ಪೊಲೀಸರ ವಿರುದ್ಧ ಆರೋಪ ಮಾಡಿದ್ದರು. ಆದರೆ, ಅದೇ ತನಿಖೆಯಲ್ಲಿ ಕಾರ್ಯನಿರ್ವಹಿಸಿದ ಪೊಲೀಸರಿಗೆ ಕೇಂದ್ರದ ಮೋದಿ ಸರ್ಕಾರವೇ ಪದಕ ನೀಡಿ ಗೌರವಿಸಿದೆ. ಇದಕ್ಕೆ ಕುಮಾರಸ್ವಾಮಿ ಏನು ಉತ್ತರಿಸುತ್ತಾರೆ ಎಂದು ಕೇಳಿದರು.
ಸ್ಟಿಂಗ್ ಪ್ರಕರಣದ ತನಿಖೆಯಲ್ಲಿ ಪೊಲೀಸರು ಯಾವುದೇ ನಿಯಮ ಉಲ್ಲಂಘಿಸಿಲ್ಲ. ಸುಳ್ಳು ಮಾಹಿತಿಯನ್ನೂ ಸೋರಿಕೆ ಮಾಡಿಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಕೇಂದ್ರ ಸಚಿವರಾಗಿದ್ದರೂ ಸಾಕ್ಷ್ಯಾಧಾರಗಳು ದೊರೆತರೆ ವಿಚಾರಣೆಗೆ ಒಳಪಡಿಸಲಾಗುವುದು. ತನಿಖೆಯ ಸತ್ಯಾಂಶ ಶೀಘ್ರದಲ್ಲೇ ಹೊರಬರಲಿದೆ ಎಂದು ಹೇಳಿದರು.
ಬಂಧಿತ ರಿತೇಶ ಪಾಂಡೆ ಅವರಿಗೆ ಮೊಬೈಲ್ ಖರೀದಿಸಲು ಸೂಚಿಸಿದ್ದು ಯಾರು? ಅವರಿಗೂ ಕುಮಾರಸ್ವಾಮಿಗೂ ಇರುವ ಸಂಬಂಧವೇನು ಎಂಬುದನ್ನು ಸ್ಪಷ್ಟಪಡಿಸಬೇಕು. ರಿತೇಶ ಅವರನ್ನು ಕುಮಾರಸ್ವಾಮಿ ನಿವಾಸದಲ್ಲಿ ಬಂಧಿಸಲಾಗಿದೆ ಎಂದು ನಾವು ಎಲ್ಲಿಯೂ ಹೇಳಿಲ್ಲ. ಆದರೂ ಕುಮಾರಸ್ವಾಮಿ ಅನಗತ್ಯವಾಗಿ ಪ್ರತಿಕ್ರಿಯಿಸುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಅವರನ್ನು ಬಂಧಿಸುವುದಾಗಿ ಅಥವಾ ಮುಟ್ಟುವುದಾಗಿ ನಾವು ಹೇಳಿದ್ದೇವೆಯೇ? ಕೇಂದ್ರ ಸರ್ಕಾರದಲ್ಲಿ ಅವರೊಬ್ಬರೇ ಸಚಿವರಿದ್ದಾರೆಯೇ? ಅವರ ಹೇಳಿಕೆಗಳಲ್ಲಿ ತರ್ಕವೇ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.
ತಪ್ಪುಗಳನ್ನು ಮುಚ್ಚಿಹಾಕಲು ಆರೋಪಗಳನ್ನು ಮಾಡುವುದರಿಂದ ಅಂಟಿರುವ ಕಳಂಕ ನಿವಾರಣೆಯಾಗುವುದಿಲ್ಲ. ತನಿಖೆ ಪೂರ್ಣಗೊಂಡಾಗ ಸತ್ಯ ಹೊರಬರಲಿದೆ ಎಂದು ಎಚ್ಚರಿಸಿದರು.