ಲಂಡನ್, ಮೇ 19 : ದಯವೇ ಧರ್ಮದ ಮೂಲವಯ್ಯ ಎಂಬ ಬಸವಣ್ಣನವರ ಸಂದೇಶವನ್ನು ಇಂದಿನ ಜಾಗತಿಕ ಸಂದರ್ಭದಲ್ಲಿ ಮತ್ತಷ್ಟು ಗಟ್ಟಿಯಾಗಿ ಸಾರುವ ಅಗತ್ಯವಿದೆ ಎಂದು ಚಿಕ್ಕಮಗಳೂರು ಶ್ರೀ ಬಸವತತ್ವ ಪೀಠದ ಡಾ. ಶ್ರೀ ಮನಿಪ್ರಡಾ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ಯೂರೋಪ್ ಬಸವ ಸಮಿತಿ ಜರ್ಮನಿಯ ಎರ್ಲಾಂಗನ್ ನಗರದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಇಂದಿನ ಸಮಾಜದಲ್ಲಿ ಹಿಂಸೆಯನ್ನು ಎತ್ತಿಹಿಡಿಯುವ ವಿಕೃತಿ ಹೆಚ್ಚುತ್ತಿದೆ. ಬಸವಣ್ಣ ಧರ್ಮವನ್ನು ಅದರ ಮೂಲ ಅರ್ಥದಲ್ಲಿ ವ್ಯಾಖ್ಯಾನಿಸಿ ಎಲ್ಲರಲ್ಲೂ ದಯೆಯೇ ಮುಖ್ಯವಾಗಬೇಕು ಎಂದು ಹೇಳಿದ್ದಾರೆ. ದಯೆಯುಳ್ಳದ್ದೇ ಧರ್ಮ, ದಯೆಯಿಲ್ಲದ್ದೇ ಅಧರ್ಮ ಎಂದು ಬಸವಣ್ಣ ಸಾರಿದ್ದರು ಎಂದು ತಿಳಿಸಿದರು.
ಕಾಯಕವೇ ಕೈಲಾಸ ಹಾಗೂ ದಾಸೋಹವೇ ದೇವಧಾಮ ಎಂಬ ಬಸವ ತತ್ವಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ. ಪ್ರತಿಯೊಬ್ಬರೂ ನೈತಿಕ ನೆಲೆಯಲ್ಲಿ ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಬೇಕು ಎಂಬುದು ಅನುಭವ ಮಂಟಪದ ಮೂಲ ಸಿದ್ಧಾಂತವಾಗಿತ್ತು. ಆ ಮೌಲ್ಯಗಳು ಇಂದಿನ ಸಮಾಜಕ್ಕೂ ಅತ್ಯಂತ ಅಗತ್ಯ ಹಾಗೂ ಅನಿವಾರ್ಯವಾಗಿವೆ ಎಂದು ಹೇಳಿದರು.
ಜರ್ಮನಿಯಲ್ಲಿರುವ ಭಾರತೀಯ ರಾಯಭಾರಿ ಅಜಿತ್ ವಿನಾಯಕ ಗುಪ್ತೆ ಮಾತನಾಡಿ, ಬಸವಣ್ಣ ಕೇವಲ ತತ್ವಜ್ಞಾನಿ ಅಥವಾ ಸಾಮಾಜಿಕ ಸುಧಾರಕರಷ್ಟೇ ಅಲ್ಲ, ಆಧ್ಯಾತ್ಮಿಕ ಚೈತನ್ಯವನ್ನು ಸಾಮಾನ್ಯ ಜನಜೀವನದೊಂದಿಗೆ ಜೋಡಿಸಿದ ಮಹಾನ್ ಚಿಂತಕರಾಗಿದ್ದರು ಎಂದರು.
ಜಾತಿ, ವರ್ಗ ಹಾಗೂ ಲಿಂಗ ತಾರತಮ್ಯವನ್ನು ತಿರಸ್ಕರಿಸಿ ಸಮಾನತೆಯ ತತ್ವ ಸಾರಿದ ಬಸವಣ್ಣ, ವಿಶ್ವದ ಮೊದಲ ಸಂಸತ್ತು ಎಂದು ಪರಿಗಣಿಸಲಾದ ಅನುಭವ ಮಂಟಪದ ಮೂಲಕ ಎಲ್ಲರಿಗೂ ಸಮಾನ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಿದ್ದರು ಎಂದು ಹೇಳಿದರು.
ಇಂದಿನ ಜಾಗತಿಕ ಸಮಸ್ಯೆಗಳಿಗೆ ಭಾರತೀಯ ಪ್ರಾಚೀನ ಜ್ಞಾನ ಪರಂಪರೆ ಪರಿಹಾರ ನೀಡಬಲ್ಲದು. ಭಾರತ ಮತ್ತು ಜರ್ಮನಿ ನಡುವಿನ ಸಾಂಸ್ಕೃತಿಕ ಸೇತುವೆಯಾಗಿ ಈ ಕಾರ್ಯಕ್ರಮ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಇಂಡಾಲಜಿಸ್ಟ್ ಹಾಗೂ ದಕ್ಷಿಣ ಏಷ್ಯಾ ಅಧ್ಯಯನ ವಿಭಾಗದ ಪ್ರೊ. ಡಾ. ರಾಬರ್ಟ್ ಜೆ ಝೈಡೆನ್‌ಬೋಸ್ ಮಾತನಾಡಿ, ದಾಸೋಹ ತತ್ವವು ಸರ್ವೋದಯ ಚಿಂತನೆಯ ಆಧಾರವಾಗಿದೆ. ಅದು ಕೇವಲ ಸಿದ್ಧಾಂತವಲ್ಲ, ಬದುಕಿನ ದರ್ಶನವಾಗಿದೆ ಎಂದು ಹೇಳಿದರು.
ಐಸಿರಿ ಫೌಂಡೇಷನ್ ನಿರ್ದೇಶಕ ರೋಹನ್ ಭಾರ್ಗವಪುರಿ ಮಾತನಾಡಿ, ಬಸವಣ್ಣನವರ ದಾಸೋಹ, ಸಮಾನತೆ ಹಾಗೂ ಕಾಯಕ ತತ್ವಗಳು ಇಡೀ ಜಗತ್ತಿಗೆ ಮಾದರಿಯಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎರ್ಲಾಂಗನ್ ನಗರದ ಉಪಮೇಯರ್ ಇವಾ ಲಿನ್ಹಾರ್ಟ್, ವಿಹೆಚ್‌ಪಿ ಯೂರೋಪ್ ಪ್ರತಿನಿಧಿ ರಾಹುಲ್ ನಾರಾಯಣ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಯೂರೋಪ್ ಬಸವ ಸಮಿತಿಯ ಅಧ್ಯಕ್ಷ ವಿಜಯ್ ಕುಮಾರ್ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.