ತಂದೆಯ ಸಾವಿಗೆ ಪ್ರತೀಕಾರ ತೀರಿಸಿಯೇ ತೀರುತ್ತೇವೆ: ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಶಪಥ
ತೆಹರಾನ್: ಎರಡು ಯುದ್ಧಗಳಲ್ಲಿ ಮೃತಪಟ್ಟ ಎಲ್ಲ ಹುತಾತ್ಮರ ರಕ್ತಕ್ಕೂ ಹಾಗೂ ತಮ್ಮ ತಂದೆ ಆಯತೊಲ್ಲಾ ಅಲಿ ಖಮೇನಿ ಅವರ ಸಾವಿಗೂ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಘೋಷಿಸಿದ್ದಾರೆ.
ದೇಶದ ಜನರನ್ನುದ್ದೇಶಿಸಿ ಬಿಡುಗಡೆ ಮಾಡಿದ ಲಿಖಿತ ಸಂದೇಶದಲ್ಲಿ ಮಾತನಾಡಿರುವ ಮೊಜ್ತಬಾ ಖಮೇನಿ, "ತಂದೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದು ಇಡೀ ರಾಷ್ಟ್ರದ ಸಂಕಲ್ಪವಾಗಿದೆ. ಆ ಪ್ರತೀಕಾರ ಖಂಡಿತವಾಗಿಯೂ ತೀರಿಸಲಾಗುತ್ತದೆ" ಎಂದು ಹೇಳಿದ್ದಾರೆ.
ಆಯತೊಲ್ಲಾ ಅಲಿ ಖಮೇನಿ ಅವರ ಅಂತಿಮಯಾತ್ರೆ ಅವರ ತವರು ಹಾಗೂ ಶಿಯಾ ಮುಸ್ಲಿಮರ ಪ್ರಮುಖ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಈಶಾನ್ಯ ಇರಾನ್‌ನ ಮಶಾದ್ ನಗರದಲ್ಲಿ ಭಾರಿ ಜನಸ್ತೋಮದ ನಡುವೆ ನೆರವೇರಿತ್ತು. ಅವರ ಅಂತ್ಯಕ್ರಿಯೆಗೆ ಸಂಬಂಧಿಸಿದ ಧಾರ್ಮಿಕ ವಿಧಿವಿಧಾನಗಳು ಜುಲೈ 4ರಿಂದ 9ರವರೆಗೆ ನಡೆದಿದ್ದವು.
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ನಡೆಸಿದ ಯುದ್ಧದ ಮೊದಲ ದಿನವಾದ ಫೆಬ್ರುವರಿ 28ರಂದು ನಡೆದ ದಾಳಿಯಲ್ಲಿ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದರು. ಮೃತಪಟ್ಟ ವೇಳೆ ಅವರಿಗೆ 86 ವರ್ಷ ವಯಸ್ಸಾಗಿತ್ತು.
ಈ ದಾಳಿಯಲ್ಲಿ ಮೊಜ್ತಬಾ ಖಮೇನಿ ಅವರ ಪತ್ನಿ, ಮೊಮ್ಮಗಳು, ಅಳಿಯ ಹಾಗೂ ಮಗಳೂ ಸಾವಿಗೀಡಾಗಿದ್ದರು. ಅವರನ್ನೂ ಆಯತೊಲ್ಲಾ ಅಲಿ ಖಮೇನಿ ಅವರ ಸಮಾಧಿಯ ಸಮೀಪದಲ್ಲೇ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಶಿಯಾ ಮುಸ್ಲಿಮರ ಎಂಟನೇ ಇಮಾಮ್ ಎಂದು ಪೂಜಿಸಲ್ಪಡುವ ಇಮಾಮ್ ರೆಜಾ ಅವರ ದರ್ಗಾ ಆವರಣದಲ್ಲೇ ಆಯತೊಲ್ಲಾ ಅಲಿ ಖಮೇನಿ ಅವರನ್ನು ಸಮಾಧಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.