ತೆಹರಾನ್, 15: ಇರಾನ್‌ನ ಬಂದರುಗಳು ಮತ್ತು ಕರಾವಳಿ ಪ್ರದೇಶಗಳ ಮೇಲೆ ಅಮೆರಿಕ ಮತ್ತೆ ನೌಕಾ ದಿಗ್ಬಂಧನ ಹೇರಿದ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಅಮೆರಿಕದ ಈ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಇರಾನ್, ಅಗತ್ಯಬಿದ್ದರೆ ಮಧ್ಯಪ್ರಾಚ್ಯದ ತೈಲ ಮತ್ತು ಅನಿಲ ರಫ್ತನ್ನೇ ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದೆ. ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಇಂಧನ ಹಿತಾಸಕ್ತಿಗೆ ಸಂಬಂಧಿಸಿದ ಇತರ ತೈಲ ಹಾಗೂ ಅನಿಲ ಸಾಗಣೆ ಮಾರ್ಗಗಳೂ ಗುರಿಯಾಗಬಹುದು ಎಂದು ಇರಾನ್ ಸ್ಪಷ್ಟಪಡಿಸಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, "ಈ ಪ್ರದೇಶದಿಂದ ತೈಲ ಮತ್ತು ಅನಿಲ ಎಲ್ಲರಿಗೂ ಲಭ್ಯವಾಗಬೇಕು. ಇಲ್ಲವಾದರೆ ಯಾರಿಗೂ ಲಭ್ಯವಾಗುವುದಿಲ್ಲ" ಎಂದು ಎಚ್ಚರಿಕೆ ನೀಡಿದೆ. ಅಮೆರಿಕ ತನ್ನ ದಿಗ್ಬಂಧನವನ್ನು ಮುಂದುವರಿಸಿದರೆ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರವನ್ನು ಮತ್ತಷ್ಟು ನಿರ್ಬಂಧಿಸುವುದಾಗಿ ಹೇಳಿದೆ.
ಹಾರ್ಮುಜ್ ಜಲಸಂಧಿ ಜಾಗತಿಕ ಇಂಧನ ಪೂರೈಕೆಯ ಪ್ರಮುಖ ಮಾರ್ಗವಾಗಿದ್ದು, ವಿಶ್ವದ ಕಚ್ಚಾ ತೈಲದ ಸುಮಾರು ಐದನೇ ಒಂದು ಭಾಗ ಇದೇ ಮಾರ್ಗದ ಮೂಲಕ ಸಾಗುತ್ತದೆ. ಅಲ್ಲಿನ ಯಾವುದೇ ಅಡ್ಡಿ ಜಾಗತಿಕ ತೈಲ ಬೆಲೆ, ಅನಿಲ ಪೂರೈಕೆ ಹಾಗೂ ಇಂಧನ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.
ಅಮೆರಿಕ ಈ ಹಿಂದೆ ಉಭಯ ದೇಶಗಳ ನಡುವಿನ ತಾತ್ಕಾಲಿಕ ಒಪ್ಪಂದದ ಹಿನ್ನೆಲೆಯಲ್ಲಿ ದಿಗ್ಬಂಧನವನ್ನು ಹಿಂಪಡೆದಿತ್ತು. ಆದರೆ ಇತ್ತೀಚೆಗೆ ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿ ಹಾಗೂ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಮತ್ತೆ ನೌಕಾ ದಿಗ್ಬಂಧನ ಜಾರಿಗೊಳಿಸಿದೆ. ಇದರ ಬೆನ್ನಲ್ಲೇ ಇರಾನ್‌ನ ಹಲವು ಸೇನಾ ಗುರಿಗಳ ಮೇಲೆ ವೈಮಾನಿಕ ದಾಳಿಯನ್ನೂ ನಡೆಸಿದೆ.
ಇದಕ್ಕೆ ಪ್ರತಿಯಾಗಿ ಬಹ್ರೈನ್ ಹಾಗೂ ಕುವೈತ್ನಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್ ತಿಳಿಸಿದೆ. ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಇಂಧನ ಹಾಗೂ ಸೇನಾ ಮೂಲಸೌಕರ್ಯಗಳು ಇನ್ನು ಮುಂದೆ ಗುರಿಯಾಗುವ ಸಾಧ್ಯತೆಯಿದೆ ಎಂದು ಐಆರ್‌ಜಿಸಿ ಎಚ್ಚರಿಕೆ ನೀಡಿದೆ.
ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳಿಗೆ ಅಮೆರಿಕ ನೌಕಾಪಡೆಯೊಂದಿಗೆ ಸಂಪರ್ಕದಲ್ಲಿರುವಂತೆ ಸೂಚಿಸಲಾಗಿದೆ. ಪ್ರದೇಶದಲ್ಲಿ ಹೆಚ್ಚುವರಿ ಯುದ್ಧನೌಕೆಗಳು ಹಾಗೂ ಸೇನಾ ಸಾಮರ್ಥ್ಯವನ್ನು ನಿಯೋಜಿಸಿರುವ ಅಮೆರಿಕ, ಯಾವುದೇ ದಾಳಿಗೆ ತಕ್ಷಣ ಪ್ರತಿಕ್ರಿಯೆ ನೀಡಲು ಸಜ್ಜಾಗಿದೆ ಎಂದು ತಿಳಿಸಿದೆ.