ಅಗರ್ತಲಾ, ಜುಲೈ 20: ಎಂಥ ಕಾಲ ಬಂತಪ್ಪಾ . ತ್ರಿಪುರಾ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಹಾಗೂ ಹಿರಿಯ ಐಪಿಎಸ್ ಅಧಿಕಾರಿ ಅನುರಾಗ ಧಂಕರ್ ಅವರು ಸೋಮವಾರ ಅಗರ್ತಲಾದಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯ ತಮ್ಮ ಕಚೇರಿಯಲ್ಲಿಯೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಇದು ಆತ್ಮಹತ್ಯೆಯ ಪ್ರಕರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದರೂ, ಸಾವಿಗೆ ನಿಖರವಾದ ಕಾರಣವನ್ನು ಅಧಿಕಾರಿಗಳು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ಮುಂದುವರಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತ್ರಿಪುರಾ ಮುಖ್ಯಮಂತ್ರಿ ಸೇರಿದಂತೆ ಹಿರಿಯ ಸರ್ಕಾರಿ ಅಧಿಕಾರಿಗಳು ಪೊಲೀಸ್ ಪ್ರಧಾನ ಕಚೇರಿಗೆ ಭೇಟಿ ನೀಡಿ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದರು.
ಧಂಕರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಗರ್ತಲಾದ ಗೋವಿಂದ ಬಲ್ಲಭ್ (ಜಿಬಿ) ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ತನಿಖೆಯ ಬಳಿಕ ಸಾವಿಗೆ ನಿಖರವಾದ ಕಾರಣ ತಿಳಿಯುವ ನಿರೀಕ್ಷೆಯಿದೆ.