ಮಾಸ್ಕೋ, 15: ಭಾರತೀಯ ಮೂಲದ ನಾಸಾ ಗಗನಯಾತ್ರಿ ಅನಿಲ ಮೆನನ್ ತಮ್ಮ ಮೊದಲ ಬಾಹ್ಯಾಕಾಶ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ್ದಾರೆ.
ಅನಿಲ್ ಮೆನನ್ ರಷ್ಯಾದ ಸೋಯುಜ್ ಎಂಎಸ್-29 ಬಾಹ್ಯಾಕಾಶ ನೌಕೆಯ ಮೂಲಕ ಕಝಾಕಿಸ್ತಾನ್‌ನ ಬೈಕೊನೂರ್ ಕಾಸ್ಮೊಡ್ರೋಮನಿಂದ ಉಡಾವಣೆಯಾದರು. ಅವರೊಂದಿಗೆ ರಷ್ಯಾದ ಗಗನಯಾತ್ರಿಗಳಾದ ಪಯೋಟರ್ ಡುಬ್ರೊವ್ ಮತ್ತು ಅನ್ನಾ ಕಿಕಿನಾ ಕೂಡ ಬಾಹ್ಯಾಕಾಶ ಯಾನ ಕೈಗೊಂಡಿದ್ದರು.
ಉಡಾವಣೆಯ ಬಳಿಕ ನಿಗದಿತ ವೇಳಾಪಟ್ಟಿಯಂತೆ ಸೋಯುಜ್ ನೌಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದೊಂದಿಗೆ ಯಶಸ್ವಿಯಾಗಿ ಜೋಡಣೆಯಾಗಿ, ಮೂವರು ಗಗನಯಾತ್ರಿಗಳು ಸುರಕ್ಷಿತವಾಗಿ ನಿಲ್ದಾಣ ಪ್ರವೇಶಿಸಿದರು.
ಅನಿಲ ಮೆನನ್ ಅವರ ಈ ಮೊದಲ ಬಾಹ್ಯಾಕಾಶ ಯಾನವು ಭಾರತೀಯ ಮೂಲದ ವಿಜ್ಞಾನಿಗಳ ಸಾಧನೆಯ ಮತ್ತೊಂದು ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ಅವರು ಮುಂದಿನ ಕೆಲವು ತಿಂಗಳುಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವೈಜ್ಞಾನಿಕ ಪ್ರಯೋಗಗಳು, ವೈದ್ಯಕೀಯ ಸಂಶೋಧನೆ ಹಾಗೂ ವಿವಿಧ ತಾಂತ್ರಿಕ ಅಧ್ಯಯನಗಳಲ್ಲಿ ಭಾಗವಹಿಸಲಿದ್ದಾರೆ.