LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
National News

ದೆಹಲಿ ಪ್ರತಿಭಟನೆಗೆ ನಿರ್ಬಂಧ ಹೇರಿದ ಕೇಂದ್ರಕ್ಕೆ ಸುಪ್ರೀಂ ಕೋರ್ಟ ತರಾಟೆ

ಹೊಸದಿಲ್ಲಿ, ಅ. 9: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಅಕ್ಟೋಬರ್ 10ರಂದು ರಾಷ್ಟ್ರ ರಾಜಧಾನಿಯಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ರೈಲು ಸಂಚಾರ ರದ್ದುಗೊಳಿಸಿ, ಮೆಟ್ರೋ ನಿಲ್ದಾಣಗಳನ್ನು ಮುಚ್ಚಿರುವ ಕ್ರಮದ ಬಗ್ಗೆ ಸುಪ್ರೀಂ ಕೋರ್ಟ ಶುಕ್ರವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನೆಪದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಸ್ಥಗಿತಗೊಳಿಸುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಪ್ರತಿಭಟನೆ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅಧಿಕಾರ ಸರ್ಕಾರಕ್ಕಿದೆ. ಆದರೆ, ಅದಕ್ಕಾಗಿ ಎಲ್ಲವನ್ನೂ ಬಂದ್ ಮಾಡಿ ಜನಸಾಮಾನ್ಯರ ಸಂಚಾರಕ್ಕೆ ಅಡ್ಡಿಪಡಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ನೇತೃತ್ವದ ಪೀಠ ಸ್ಪಷ್ಟಪಡಿಸಿದೆ.

ಮೆಟ್ರೋ ನಿಲ್ದಾಣಗಳ ಮುಚ್ಚುವಿಕೆ ಹಾಗೂ ರೈಲುಗಳ ರದ್ದತಿ ಪ್ರಶ್ನಿಸಿ ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಹಾಗೂ ಸಂಸದ ಕಪಿಲ್ ಸಿಬಲ್, ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವಿಧಿಸಿರುವ ನಿರ್ಬಂಧಗಳಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಎಲ್ಲ ರೈಲುಗಳನ್ನು ರದ್ದುಗೊಳಿಸಲಾಗಿದೆ. ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದೆ. ಜನರು ಎಲ್ಲಿಗೂ ಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಂತಿಯುತ ಪ್ರತಿಭಟನೆ ನಡೆಯುತ್ತಿರುವಾಗ ಇಷ್ಟೊಂದು ನಿರ್ಬಂಧಗಳ ಅಗತ್ಯವೇನು ಎಂದು ಸಿಬಲ್ ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ, ಪ್ರತಿಭಟನಾಕಾರರಿಗಿಂತಲೂ ಹೆಚ್ಚಾಗಿ ಪ್ರತಿದಿನ ಕೆಲಸ, ವ್ಯಾಪಾರ ಹಾಗೂ ಜೀವನೋಪಾಯಕ್ಕಾಗಿ ಸಂಚರಿಸುವ ಸಾಮಾನ್ಯ ನಾಗರಿಕರ ಹಿತಾಸಕ್ತಿಯ ಬಗ್ಗೆ ನ್ಯಾಯಾಲಯ ಕಳವಳ ಹೊಂದಿದೆ ಎಂದು ತಿಳಿಸಿದರು.

ಗುರುಗ್ರಾಮ, ಗ್ರೇಟರ್ ನೋಯ್ಡಾ, ಪೂರ್ವ ದೆಹಲಿ ಹಾಗೂ ದಕ್ಷಿಣ ದೆಹಲಿಯಿಂದ ಪ್ರತಿದಿನ ನೂರಾರು, ಸಾವಿರಾರು ಜನರು ತಮ್ಮ ಉದ್ಯೋಗ ಮತ್ತು ಇತರ ಅಗತ್ಯಗಳಿಗಾಗಿ ಪ್ರಯಾಣಿಸುತ್ತಾರೆ. ಮೆಟ್ರೋ ನಿಲ್ದಾಣಗಳ ಪ್ರವೇಶದ್ವಾರಗಳನ್ನೇ ಸಂಪೂರ್ಣ ಮುಚ್ಚುವುದರಿಂದ ಇಂತಹ ಪ್ರಯಾಣಿಕರಿಗೆ ಅನಗತ್ಯ ತೊಂದರೆಯಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಸಾಲಿಸಿಟರ್ ಜನರಲ್‌ಗೆ ತಿಳಿಸಿದರು.

ಯುವಕರು, ವೃದ್ಧರು ಸೇರಿದಂತೆ ಎಲ್ಲ ವಯೋಮಾನದ ಜನರು ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿದ್ದಾರೆ. ಅವರಿಗೆ ಮೂಲಭೂತ ಸೌಲಭ್ಯಗಳನ್ನು ಪಡೆಯುವ ಹಕ್ಕಿದೆ. ಪ್ರತಿಭಟನೆಯ ಕಾರಣಕ್ಕೆ ಈ ಹಕ್ಕುಗಳಿಗೆ ಅಡ್ಡಿಯಾಗಬಾರದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಕಾನೂನು ಜಾರಿ ಸಂಸ್ಥೆಗಳು ಪರಿಸ್ಥಿತಿಗೆ ಅನುಗುಣವಾಗಿ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಬಹುದು. ಆದರೆ, ಆ ಅಧಿಕಾರವನ್ನು ಬಳಸಿಕೊಂಡು ಸಂಪೂರ್ಣ ಸಾರಿಗೆ ವ್ಯವಸ್ಥೆಯನ್ನು ಸ್ಥಗಿತಗೊಳಿಸುವುದು ಸಮರ್ಥನೀಯವಲ್ಲ ಎಂದು ನ್ಯಾಯಾಲಯ ಹೇಳಿದೆ.

ಮುಚ್ಚಲಾಗಿರುವ ಮೆಟ್ರೋ ನಿಲ್ದಾಣಗಳ ಸಂಖ್ಯೆಯನ್ನು ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ ಸುಪ್ರೀಂ ಕೋರ್ಟ, ಭದ್ರತಾ ವ್ಯವಸ್ಥೆ ಮತ್ತು ಸಾರ್ವಜನಿಕರ ದೈನಂದಿನ ಸಂಚಾರದ ನಡುವೆ ಸಮತೋಲನ ಕಾಯ್ದುಕೊಳ್ಳುವ ಅಗತ್ಯವನ್ನು ಒತ್ತಿಹೇಳಿದೆ.

ಅಕ್ಟೋಬರ್ 10ರ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಜಾರಿಗೊಳಿಸಿರುವ ವ್ಯಾಪಕ ನಿರ್ಬಂಧಗಳ ಕುರಿತು ನಡೆದ ಈ ವಿಚಾರಣೆಯಲ್ಲಿ, ಸಾರ್ವಜನಿಕರ ಸಂಚಾರ ಹಕ್ಕು ಹಾಗೂ ಅಗತ್ಯ ಸಾರಿಗೆ ಸೌಲಭ್ಯಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂಬ ನ್ಯಾಯಾಲಯದ ನಿಲುವು ಪ್ರಮುಖವಾಗಿ ವ್ಯಕ್ತವಾಯಿತು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಿನಿ ರಜನೀಶ ಸೇರಿ 6 ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ಹಕ್ಕುಚ್ಯುತಿ ಕ್ರಮಕ್ಕೆ ಆಗ್ರಹಅಶಾಂತಿಗೆ ಇಸ್ರೇಲ್ ಆಕ್ರಮಣವೇ ಕಾರಣ: 4 ರಾಷ್ಟ್ರಗಳ ಜಂಟಿ ಹೇಳಿಕೆವಿದ್ಯಾರ್ಥಿಗಳ ಹೋರಾಟಕ್ಕೆ ನಾಸಿರುದ್ದೀನ್ ಶಾ, ಪಾಯಲ್ ಕಪಾಡಿಯಾ ಬೆಂಬಲಕಾನೂನಿನ ಭಯವೇ ಇಲ್ಲವೇ?: ಉದ್ರಿ ನೀಡಲು ನಿರಾಕರಿಸಿದ್ದಕ್ಕೆ ಹೋಟೆಲ್ ಮಾಲಕನ ಹತ್ಯೆಗೋಲ್ಡನ್ ಚಾರಿಯಟ್ ರೈಲಿಗೆ ಮರುಚಾಲನೆ: ಟಿಕೆಟ್ ದರ 3.5 ಲಕ್ಷದಿಂದ 4.4 ಲಕ್ಷ ರೂ.ಪೆಲೆಟ್ ಗನ್ ಬಳಕೆ, ಮಹಿಳೆಯರಿಗೆ ಕಿರುಕುಳ : ಸುಪ್ರೀಂ ಕೋರ್ಟ ಸಮಿತಿಯಿಂದ ವಿಚಾರಣೆಸಿದ್ದರಾಮಯ್ಯ ಕುಟುಕು ಕಾರ್ಯಾಚರಣೆ : ದೆಹಲಿಯ ರಿತೇಶ ಪಾಂಡೆ ಬಂಧನಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಸಿಲುಕಿ ಯುವಕನ ಮುಖಕ್ಕೆ ಗಂಭೀರ ಗಾಯಚಿರತೆ ಸೆರೆ ವೇಳೆ ಅರಣ್ಯ ಇಲಾಖೆ ವೈದ್ಯರ ಮೇಲೆ ಹಲ್ಲೆ: 15 ಮಂದಿ ವಿರುದ್ಧ ಪ್ರಕರಣಸರ್ಕಾರವನ್ನು ಪ್ರಶ್ನಿಸಿದರೆ ಶಾಂತಿ ಭಂಗವೇ?: ಬಾಂಡ್‌ಗೆ ಸಹಿ ಹಾಕಲು ನೇಹಾ ಬೋರಾ ನಿರಾಕರಣೆ