ಬೆಂಗಳೂರು, ಅ. 6 (ಸಮದರ್ಶಿ ಸುದ್ದಿ): ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಿಂದ ಆಗಿವೆ ಎನ್ನಲಾದ ಅನ್ಯಾಯ ಮತ್ತು ಅಕ್ರಮಗಳನ್ನು ಸಾರ್ವಜನಿಕರ ಮುಂದಿಡಲು ಅಕ್ಟೋಬರ್ 8ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ‘ಜನತಾ ನ್ಯಾಯಾಲಯ’ ಹೆಸರಿನ ವಿನೂತನ ಪ್ರತಿಭಟನೆ ನಡೆಯಲಿದೆ ಎಂದು ಎಸ್‌ಐಆರ್ ವಿರೋಧಿ ಒಕ್ಕೂಟ ಹಾಗೂ ನಾಗರಿಕ ಮತ ಕಾವಲು ಸಮಿತಿ ತಿಳಿಸಿವೆ.
ಕಾರ್ಯಕ್ರಮದಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮುಖಂಡರಾದ ಅಭಿಜೀತ್ ದಿಪ್ಕೆ, ಅಶುತೋಷ್ ರಾಂಕಾ ಹಾಗೂ ಮತ್ತೊಬ್ಬ ಖ್ಯಾತ ಯೂಟ್ಯೂಬರ್ ಭಾಗವಹಿಸಲಿದ್ದಾರೆ. ನಟ ಪ್ರಕಾಶ್ ರಾಜ್ ಕಳೆದ 15 ದಿನಗಳಿಂದ ರಾಜ್ಯದಾದ್ಯಂತ ಸಂಚರಿಸಿ ಸಂಗ್ರಹಿಸಿರುವ ಮಾಹಿತಿ ಹಾಗೂ ಎಸ್‌ಐಆರ್ ವಿರೋಧಿ ಒಕ್ಕೂಟ ಮತ್ತು ನಾಗರಿಕ ಮತ ಕಾವಲು ಸಮಿತಿ ಕಲೆಹಾಕಿರುವ ಪ್ರಕರಣಗಳನ್ನು ಜನತಾ ನ್ಯಾಯಾಲಯದ ಮುಂದೆ ಮಂಡಿಸಲಾಗುವುದು.
ಎಸ್‌ಐಆರ್ ಪ್ರಕ್ರಿಯೆಯ ಹಿನ್ನೆಲೆ ಹಾಗೂ ಅದರಿಂದ ಆಗಿವೆ ಎನ್ನಲಾದ ಅನ್ಯಾಯಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಾರ್ವಜನಿಕವಾಗಿ ಹಾಜರುಪಡಿಸಲಾಗುವುದು. ಹಿರಿಯ ನ್ಯಾಯಮೂರ್ತಿಗಳು ಅಹವಾಲುಗಳನ್ನು ಆಲಿಸಿ ‘ತೀರ್ಪು’ ನೀಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ಪ್ರಜಾಪ್ರಭುತ್ವದ ಹಕ್ಕುಗಳ ರಕ್ಷಣೆಗಾಗಿ ನಡೆಯುವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಪಾಲ್ಗೊಳ್ಳುವಂತೆ ಕರೆ ನೀಡಲಾಗಿದೆ.
ನಟರಾದ ಪ್ರಕಾಶ್ ರಾಜ್ ಮತ್ತು ಕಿಶೋರ್ ಸೇರಿದಂತೆ ಸಾಹಿತಿಗಳು, ಚಿಂತಕರು, ಸಿಜೆಪಿ ಹಾಗೂ ವಿವಿಧ ವಿದ್ಯಾರ್ಥಿ, ಯುವಜನ, ರೈತ, ಕಾರ್ಮಿಕ, ದಲಿತ ಮತ್ತು ಮಹಿಳಾ ಸಂಘಟನೆಗಳ ಮುಖಂಡರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಕೊಡಗಿನಲ್ಲಿ ಸಂತ್ರಸ್ತರ ಅಹವಾಲು
ಸೆಪ್ಟೆಂಬರ್ 20ರಂದು ಕೊಡಗಿನ ಪಾಲೆಮಾಡಿನಲ್ಲಿ ಪ್ರಕಾಶ್ ರಾಜ್ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಅಹವಾಲು ಕಾರ್ಯಕ್ರಮದಲ್ಲಿ ಹಾಡಿ ನಿವಾಸಿಗಳು ಎಸ್‌ಐಆರ್‌ನಿಂದ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದ್ದರು.
ಬಿ. ಶೆಟ್ಟಿಗೇರಿಯ ಮಂಜುಳಾ, ‘ನನಗೆ ನೋಟಿಸ್ ಬಂದಿದೆ ಎಂದು ಹೇಳುತ್ತಿದ್ದಾರೆ. ಆದರೆ ಈವರೆಗೆ ನೀಡಿಲ್ಲ. ಐದಾರು ಬಾರಿ ಹೋದರೂ ನಾಳೆ ಬನ್ನಿ ಎನ್ನುತ್ತಿದ್ದಾರೆ. ಎನ್ಯುಮರೇಷನ್ ಫಾರಂ ತುಂಬಿ ಕೊಟ್ಟಿದ್ದರೂ ‘ಅನ್‌ಮ್ಯಾಪ್ಡ್’ ಎಂದು ನೋಟಿಸ್ ನೀಡಿದ್ದಾರೆ. ನಾನು ಹುಟ್ಟಿ ಬೆಳೆದದ್ದೇ ಕೊಡಗಿನಲ್ಲಿ. ಪಂಚಾಯಿತಿಗೆ ಹೋಗಲು ಪ್ರತಿ ಬಾರಿ ₹300 ಕೊಟ್ಟು ಆಟೊ ಮಾಡಿಕೊಳ್ಳಬೇಕಾಗಿದೆ. ನಾವು ಕೂಲಿ ಕಾರ್ಮಿಕರು’ ಎಂದು ಅಳಲು ತೋಡಿಕೊಂಡಿದ್ದರು.
ಗೌರಿ ಎಂಬವರು, ‘ಈ ಹಿಂದೆ ಅಮ್ಮತಿಯಲ್ಲಿ ನಮಗೆ ಮತವಿತ್ತು. ಅಲ್ಲಿ ವಿಚಾರಿಸಿದಾಗ ಬಿ. ಶೆಟ್ಟಿಗೇರಿಯಲ್ಲಿ ಮಾಡಿಸಿಕೊಳ್ಳಿ ಎಂದರು. ನಾವು ಅಲ್ಲಿ ಇಲ್ಲ ಎಂಬ ಕಾರಣಕ್ಕೆ ನಮ್ಮ ಮತ ಅಳಿಸಿದ್ದಾರೆ’ ಎಂದು ಆರೋಪಿಸಿದ್ದರು.
ಬಿ. ಶೆಟ್ಟಿಗೇರಿಯ ಕಮಲ 1995ರಲ್ಲಿ ಮತದಾನ ಮಾಡಿದ್ದರೂ 2002ರ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಪತ್ತೆಯಾಗಿಲ್ಲ. ಹೀಗಾಗಿ ಅವರಿಗೆ ಗಣತಿ ನಮೂನೆ ಬಂದಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ.
ಕೊಡಗು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಕೂಲಿ ಕಾರ್ಮಿಕರು, ಬಡವರು, ದಲಿತರು, ಅಲೆಮಾರಿಗಳು ಹಾಗೂ ಮಹಿಳೆಯರು ಎಸ್‌ಐಆರ್‌ನಿಂದ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದು ಸಂಘಟಕರ ಆರೋಪವಾಗಿದೆ. ‘ನಮ್ಮ ಹಕ್ಕು ಪಡೆಯಲು ಮತದಾನವೇ ಪ್ರಮುಖ ಅಸ್ತ್ರ; ಈಗ ಅದನ್ನೇ ಕಿತ್ತುಕೊಳ್ಳಲಾಗುತ್ತಿದೆ’ ಎಂಬ ಆತಂಕ ಸಂತ್ರಸ್ತರಲ್ಲಿದೆ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 8ರ ‘ಜನತಾ ನ್ಯಾಯಾಲಯ’ದಲ್ಲಿ ನಾಗರಿಕ ಮತ ಕಾವಲು ಸಮಿತಿ ರಾಜ್ಯದಾದ್ಯಂತ ಸಂಗ್ರಹಿಸಿರುವ ಮಾಹಿತಿಯನ್ನು ಮಂಡಿಸಲಿದ್ದು, ಎಸ್‌ಐಆರ್‌ನಿಂದ ತೊಂದರೆ ಅನುಭವಿಸಿದ್ದೇವೆ ಎನ್ನುವ ಮತದಾರರೇ ವೇದಿಕೆಗೆ ಬಂದು ತಮ್ಮ ಅಹವಾಲುಗಳನ್ನು ನೇರವಾಗಿ ವಿವರಿಸಲಿದ್ದಾರೆ.