ಬೆಂಗಳೂರು, ಅ. 6 (ಸಮದರ್ಶಿ ಸುದ್ದಿ): ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯನ್ನು ನಕಲಿ ಸುಪ್ರೀಂ ಕೋರ್ಟ ಆದೇಶ ಬಳಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಕಾರಾಗೃಹ ಇಲಾಖೆಯ ಡಿಐಜಿ ಎಂ. ಸೋಮಶೇಖರ್ ವಿರುದ್ಧ ಕೈದಿಯ ಪತ್ನಿಯ ಲೈಂಗಿಕ ಶೋಷಣೆಗೆ ಸಂಬಂಧಿಸಿದ ಗಂಭೀರ ಆರೋಪಗಳು ತನಿಖೆಯಲ್ಲಿ ಬೆಳಕಿಗೆ ಬಂದಿವೆ.
ಪ್ರಸ್ತುತ ಕಲಬುರಗಿ ಉತ್ತರ ವಲಯ ಕಾರಾಗೃಹ ಇಲಾಖೆಯ ಡಿಐಜಿಯಾಗಿರುವ ಸೋಮಶೇಖರ್ ಅವರನ್ನು ಸೋಮವಾರ ಪೊಲೀಸರು ಬಂಧಿಸಿದ್ದರು. 2018ರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಶಂಕರ್ ಎಂಬ ಕೈದಿಯನ್ನು ಸುಪ್ರೀಂ ಕೋರ್ಟ ಆದೇಶವನ್ನು ನಕಲು ಮಾಡಿ ಜೈಲಿನಿಂದ ಬಿಡುಗಡೆ ಮಾಡಿಸಿದ್ದ ಪ್ರಕರಣದಲ್ಲಿ ಅವರ ಪಾತ್ರದ ಕುರಿತು ತನಿಖೆ ನಡೆಯುತ್ತಿದೆ.
ಪ್ರಕರಣದ ಮತ್ತೊಬ್ಬ ಆರೋಪಿ ಶ್ರೀಕಾಂತ ಹಾಗೂ ಸೋಮಶೇಖರ್ ಕೈದಿಯ ಪತ್ನಿಯನ್ನು ಲೈಂಗಿಕವಾಗಿ ಶೋಷಿಸಿ, ಬಳಿಕ ನಕಲಿ ನ್ಯಾಯಾಲಯದ ಆದೇಶದ ಮೂಲಕ ಶಂಕರನನ್ನು ಜೈಲಿನಿಂದ ಬಿಡುಗಡೆ ಮಾಡಿಸಿದ್ದಾರೆ ಎಂಬ ಆರೋಪ ತನಿಖೆಯಲ್ಲಿ ಕೇಳಿಬಂದಿದೆ.
ತನಿಖೆ ವೇಳೆ ಸೋಮಶೇಖರ ಅವರು ಶಂಕರ ಪತ್ನಿಗೆ ವಿಡಿಯೊ ಕರೆ ಮಾಡಿರುವ ಮಾಹಿತಿ ಪತ್ತೆಯಾಗಿದ್ದು, ಕರೆ ವೇಳೆ ಆಕೆಯನ್ನು ವಿವಸ್ತ್ರವಾಗುವಂತೆ ಒತ್ತಡ ಹೇರಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ವಿಡಿಯೊ ಸಾಕ್ಷ್ಯವೂ ಪೊಲೀಸರಿಗೆ ಲಭ್ಯವಾಗಿದೆ ಎಂದು ವರದಿಯಾಗಿದೆ.
ಪರಪ್ಪನ ಅಗ್ರಹಾರ ಪೊಲೀಸರು ಸಂಬಂಧಿತ ವಿಡಿಯೊವನ್ನು ವಶಕ್ಕೆ ಪಡೆದು ಅದರ ಸತ್ಯಾಸತ್ಯತೆ ಹಾಗೂ ತಾಂತ್ರಿಕ ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಿದ್ದಾರೆ.