ಕೋಲ್ಕತಾ, ಅ. 6: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೇಲ್ಮನವಿಗಳನ್ನು ಇತ್ಯರ್ಥಪಡಿಸಲು ಭಾರತೀಯ ಚುನಾವಣಾ ಆಯೋಗ ಅಭಿವೃದ್ಧಿಪಡಿಸಿರುವ ವೆಬ್‌ಸೈಟ್‌ನಲ್ಲಿ ಗಂಭೀರ ದೋಷಗಳಿವೆ ಎಂದು 10ಕ್ಕೂ ಹೆಚ್ಚು ನ್ಯಾಯಮಂಡಳಿಗಳ ನ್ಯಾಯಾಧೀಶರು ಆರೋಪಿಸಿದ್ದಾರೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಸುಮಾರು 27 ಲಕ್ಷ ಮತದಾರರು ಸೇರಿದಂತೆ ಎಸ್‌ಐಆರ್ ಮೇಲ್ಮನವಿಗಳನ್ನು ಇತ್ಯರ್ಥಪಡಿಸಲು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ನ್ಯಾಯಮಂಡಳಿಗಳನ್ನು ರಚಿಸಲಾಗಿತ್ತು. ಆದರೆ ವೆಬ್‌ಸೈಟ್‌ನಲ್ಲಿನ ಲೋಪಗಳಿಂದ ಮೇಲ್ಮನವಿ ಪ್ರಕ್ರಿಯೆಯೇ ವಿಳಂಬವಾಗುತ್ತಿದೆ ಎಂದು ನ್ಯಾಯಾಧೀಶರು ಕಳವಳ ವ್ಯಕ್ತಪಡಿಸಿದ್ದಾರೆ.
ಪಕ್ಷಗಾರರಿಗೆ ನೋಟಿಸ್ ನೀಡುವುದು, ಹೆಚ್ಚುವರಿ ದಾಖಲೆಗಳನ್ನು ಪಡೆಯುವುದು, ಆನ್‌ಲೈನ್ ವಿಚಾರಣೆ ನಡೆಸುವುದು, ಅರ್ಹ ಮತದಾರರನ್ನು ಪಟ್ಟಿಗೆ ಮರುಸೇರ್ಪಡೆಗೊಳಿಸುವುದು ಹಾಗೂ ನ್ಯಾಯಮಂಡಳಿಯ ಆದೇಶದ ಪ್ರತಿಯನ್ನು ಪಡೆಯುವುದಕ್ಕೆ ಸೂಕ್ತ ವ್ಯವಸ್ಥೆಯಿಲ್ಲ ಎಂದು ಆರೋಪಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ಗೆ ಸಂಬಂಧಿಸಿದ 19 ನ್ಯಾಯಮಂಡಳಿಗಳಿದ್ದು, 10ಕ್ಕೂ ಹೆಚ್ಚು ನ್ಯಾಯಮಂಡಳಿಗಳ ನ್ಯಾಯಾಧೀಶರು ಆಗಸ್ಟ್ 11ರ ಸಭೆಯಲ್ಲಿ ಈ ಲೋಪಗಳನ್ನು ದಾಖಲಿಸಿದ್ದಾರೆ. ಸಭೆಯ ನಿರ್ಣಯಗಳನ್ನು ಚುನಾವಣಾ ಆಯೋಗ ಹಾಗೂ ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಲಾಗಿದೆ.
ಮೇಲ್ಮನವಿ ಪ್ರಕ್ರಿಯೆಗೂ ಅಡ್ಡಿ
ಪಕ್ಷಗಾರರಿಗೆ ನೋಟಿಸ್ ನೀಡಲು ವ್ಯವಸ್ಥೆ ಕಲ್ಪಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಕ್ರಮವಾಗಿಲ್ಲ. 2026ರ ಮೇ ತಿಂಗಳಲ್ಲೇ ನೋಟಿಸ್ ಮಾದರಿಯನ್ನು ಅನುಮೋದಿಸಲಾಗಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಹೆಚ್ಚುವರಿ ದಾಖಲೆಗಳನ್ನು ಪಡೆಯಲು ವ್ಯವಸ್ಥೆಯಿಲ್ಲದ ಕಾರಣ ಇಮೇಲ್ ಮೂಲಕ ಸಂಪರ್ಕಿಸಲಾಗುತ್ತಿದ್ದು, ಅದಕ್ಕೂ ಅತ್ಯಲ್ಪ ಪ್ರತಿಕ್ರಿಯೆ ಸಿಗುತ್ತಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಆನ್‌ಲೈನ್ ವಿಚಾರಣೆ ನಡೆಸಲು ಅಥವಾ ನ್ಯಾಯಮಂಡಳಿಯ ಆದೇಶದಂತೆ ಮತದಾರರ ಹೆಸರನ್ನು ಪಟ್ಟಿಗೆ ಮರುಸೇರ್ಪಡೆಗೊಳಿಸಲು ಅವಕಾಶವಿಲ್ಲ. ಮೇಲ್ಮನವಿದಾರರಿಗೆ ಆದೇಶದ ಪ್ರಮಾಣೀಕೃತ ಪ್ರತಿ ಪಡೆಯಲು ಅಥವಾ ಡೌನ್‌ಲೋಡ್ ಮಾಡಿಕೊಳ್ಳಲೂ ವ್ಯವಸ್ಥೆಯಿಲ್ಲ ಎಂದು ತಿಳಿಸಲಾಗಿದೆ.
ಸುಪ್ರೀಂ ಕೋರ್ಟ್ ಏಪ್ರಿಲ್ 1ರ ಆದೇಶದಲ್ಲಿ ಮೇಲ್ಮನವಿ ಇತ್ಯರ್ಥಕ್ಕೂ ಮುನ್ನ ಮತದಾರರ ಹೆಸರು ತೆಗೆದುಹಾಕಿರುವುದಕ್ಕೆ ಕಾರಣ ತಿಳಿಸಬೇಕು ಹಾಗೂ ದಾಖಲೆಗಳನ್ನು ಮರುಪರಿಶೀಲಿಸಬೇಕು ಎಂದು ಸೂಚಿಸಿತ್ತು.
ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಖುದ್ದಾಗಿ ಸಲ್ಲಿಸಲಾದ ಮೇಲ್ಮನವಿಗಳನ್ನು ಡಿಜಿಟಲೀಕರಣಗೊಳಿಸುವುದರಲ್ಲೂ ಸಮಸ್ಯೆಗಳಿವೆ. ಅವುಗಳನ್ನು ಸೂಕ್ತ ಡಿಜಿಟಲ್ ವೇದಿಕೆಗೆ ತರದಿದ್ದರೆ ನಾಗರಿಕರಿಗೆ ಅನ್ಯಾಯವಾಗಲಿದೆ ಎಂದು ನ್ಯಾಯಾಧೀಶರು ಎಚ್ಚರಿಸಿದ್ದಾರೆ.
ಈ ಆರೋಪಗಳ ಕುರಿತು ಪ್ರತಿಕ್ರಿಯೆ ಕೋರಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಅಕ್ಟೋಬರ್ 1ರಂದು ಚುನಾವಣಾ ಆಯೋಗ ಮತ್ತು ಕಲ್ಕತ್ತಾ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಇಮೇಲ್ ಕಳುಹಿಸಿದ್ದರೂ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ವರದಿ ತಿಳಿಸಿದೆ.
ಸುಪ್ರೀಂ ಕೋರ್ಟ್‌ಗೆ ಆರು ತಿಂಗಳ ಹಿಂದೆಯೇ ಗೊತ್ತಿತ್ತು
ಪಶ್ಚಿಮ ಬಂಗಾಳದ ಮತದಾರರಾದ ಮೊಸ್ತಾರಿ ಬಾನು ಅವರ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಏಪ್ರಿಲ್ 6ರಂದೇ ಈ ವಿಷಯವನ್ನು ಗಮನಿಸಿತ್ತು.
ಮೇಲ್ಮನವಿಗಳನ್ನು ‘ಇಸಿಐ ನೆಟ್’ ಮೂಲಕ ಅಥವಾ ಜಿಲ್ಲಾಧಿಕಾರಿ, ಜಿಲ್ಲಾ ವಿಭಾಗೀಯಾಧಿಕಾರಿ, ಎಸ್‌ಡಿಒ ಕಚೇರಿಯಲ್ಲಿ ಖುದ್ದಾಗಿ ಸಲ್ಲಿಸಬಹುದು. ಖುದ್ದಾಗಿ ಸಲ್ಲಿಸಲಾದ ಅರ್ಜಿಗಳನ್ನು ಶೀಘ್ರ ಡಿಜಿಟಲೀಕರಣಗೊಳಿಸಿ ‘ಇಸಿಐ ನೆಟ್’ಗೆ ಅಪ್‌ಲೋಡ್ ಮಾಡಬೇಕೆಂದು ಚುನಾವಣಾ ಆಯೋಗ ಮಾರ್ಚ್ 20ರಂದೇ ಅಧಿಸೂಚನೆ ಹೊರಡಿಸಿರುವುದನ್ನು ಸುಪ್ರೀಂ ಕೋರ್ಟ್ ದಾಖಲಿಸಿತ್ತು.
ಆದರೂ ಆರು ತಿಂಗಳ ಬಳಿಕವೂ ಮೇಲ್ಮನವಿ ವ್ಯವಸ್ಥೆಯ ಮೂಲಭೂತ ಲೋಪಗಳು ಮುಂದುವರಿದಿವೆ ಎಂಬ ನ್ಯಾಯಾಧೀಶರ ಆರೋಪವು ಎಸ್‌ಐಆರ್ ಅನುಷ್ಠಾನದ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.