ಛತ್ರಪತಿ ಸಂಭಾಜಿನಗರ, ಅ. 6: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 10ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಸಿಜೆಪಿ ಕಾರ್ಯಕರ್ತರಿಗೆ ಪೊಲೀಸರು ನೋಟಿಸ್ ನೀಡಿ ಒತ್ತಡ ಹೇರುತ್ತಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಆರೋಪಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಂದ್ರಾಪುರ ಪೊಲೀಸರು ಕಾರ್ಯಕರ್ತರಿಗೆ ನೋಟಿಸ್ ನೀಡಿ, ಪ್ರತಿಭಟನೆಯಲ್ಲಿ ಭಾಗವಹಿಸದಂತೆ ತಡೆಯುವುದರ ಜತೆಗೆ ಪ್ರಯಾಣ ವೆಚ್ಚದ ಮೂಲವನ್ನೂ ಪ್ರಶ್ನಿಸಿದ್ದಾರೆ. ಇದು ‘ಸರ್ವಾಧಿಕಾರಿ ಧೋರಣೆ’ ಎಂದು ಟೀಕಿಸಿದರು.
‘ಮಹಾರಾಷ್ಟ್ರ ಪೊಲೀಸರು ದೇಶದಲ್ಲೇ ಅತ್ಯುತ್ತಮ ಪಡೆ ಎಂದು ಹಲವು ಬಾರಿ ಹೇಳಿದ್ದೇನೆ. ಆದರೆ ಈಗ ನಮ್ಮ ಕಾರ್ಯಕರ್ತರಿಗೆ ನೋಟಿಸ್ ನೀಡಿ ದೆಹಲಿ ಪ್ರತಿಭಟನೆಗೆ ಹೋಗದಂತೆ ತಡೆಯುತ್ತಿರುವುದು ನೋವುಂಟುಮಾಡಿದೆ’ ಎಂದರು.
ಪ್ರತಿಭಟನೆ ಹಿಂಸಾತ್ಮಕವಾಗುವ ಸಾಧ್ಯತೆಯಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿರುವುದಕ್ಕೂ ಆಕ್ಷೇಪಿಸಿದ ದೀಪ್ಕೆ, ‘ಪ್ರತಿಭಟನೆ ಹಿಂಸಾತ್ಮಕವಾಗಲಿದೆ ಎಂದು ಪೊಲೀಸರಿಗೆ ಮೊದಲೇ ಹೇಗೆ ಗೊತ್ತು? ಅವರೇನಾದರೂ ಮುಂಚಿತವಾಗಿ ಸಂಚು ರೂಪಿಸಿದ್ದಾರೆಯೇ? ನಾವು ಮಹಾತ್ಮ ಗಾಂಧಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಿದ್ಧಾಂತಗಳ ಬಗ್ಗೆ ಮಾತನಾಡುತ್ತೇವೆ. ಇದು ಹಿಂಸಾತ್ಮಕವೇ?’ ಎಂದು ಪ್ರಶ್ನಿಸಿದರು.
ಆದರೆ, ಇಂತಹ ನೋಟಿಸ್‌ಗಳು ಪ್ರತಿಭಟನೆಗೂ ಮುನ್ನ ಕೈಗೊಳ್ಳುವ ಸಾಮಾನ್ಯ ಮುನ್ನೆಚ್ಚರಿಕೆ ಕ್ರಮಗಳ ಭಾಗ ಎಂದು ಚಂದ್ರಾಪುರ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ದೀಪ್ಕೆ, ‘ಒಂದು ದೇಶ, ಒಂದು ಚುನಾವಣೆ’ ಕೇವಲ ಘೋಷಣೆಯಾಗಿದ್ದು, ಅದರ ಹಿಂದಿನ ನಿಜವಾದ ಉದ್ದೇಶ ‘ಒಂದು ದೇಶ, ಒಂದೇ ರಾಜಕೀಯ ಪಕ್ಷ’ ಎಂಬುದಾಗಿದೆ ಎಂದು ಆರೋಪಿಸಿದರು.
ಎಸ್‌ಐಆರ್ ಮತ್ತು ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ವಿರೋಧಿಸಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ರಾಜೀನಾಮೆಗೆ ಒತ್ತಾಯಿಸಿ ಅಕ್ಟೋಬರ್ 10ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಸಿಜೆಪಿ ನಿರ್ಧರಿಸಿದೆ.