ಹೊಸದಿಲ್ಲಿ, ಆಗಸ್ಟ್ 13: ಫುಕೆಟ್‌ನಿಂದ ದಿಲ್ಲಿಗೆ ಬರುತ್ತಿದ್ದ ವಿಮಾನವು ಹಾರಾಟದ ಮಧ್ಯೆ ಏಕಾಏಕಿ 300 ಅಡಿ ಕೆಳಕ್ಕೆ ಕುಸಿದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದ ಘಟನೆ ಬೆನ್ನಲ್ಲೇ, ವಿಮಾನದ ಮುಖ್ಯ ಪೈಲಟ್ ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದರ ಬೆನ್ನಲ್ಲೇ ಏರ್ ಇಂಡಿಯಾ ತನ್ನ ಎಲ್ಲ ಪೈಲಟ್‌ಗಳಿಗೆ ವಿಮಾನ ಹಾರಾಟಕ್ಕೂ ಮುನ್ನ ಮಾದಕ ದ್ರವ್ಯ ಸೇವನೆ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ.
ಆಗಸ್ಟ್ 4ರಂದು ಫುಕೆಟ್‌ನಿಂದ ದಿಲ್ಲಿಗೆ ಬರುತ್ತಿದ್ದ ಏರ್ ಇಂಡಿಯಾದ ಎಐ 2379 ವಿಮಾನವು ಹಾರಾಟದ ವೇಳೆ ಇದ್ದಕ್ಕಿದ್ದಂತೆ ಸುಮಾರು 300 ಅಡಿ ಕೆಳಕ್ಕೆ ಇಳಿದಿತ್ತು. ಈ ವೇಳೆ ನಾಲ್ವರು ಸಿಬ್ಬಂದಿ ಸೇರಿದಂತೆ 24 ಮಂದಿ ಗಾಯಗೊಂಡಿದ್ದರು. ಘಟನೆಗೆ ಆರಂಭಿಕವಾಗಿ ವಾಯು ಪ್ರಕ್ಷುಬ್ಧತೆ ಕಾರಣ ಎಂದು ಏರ್ ಇಂಡಿಯಾ ತಿಳಿಸಿತ್ತು. ಆದರೆ ಬಳಿಕ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ವಿಮಾನದ ಮುಖ್ಯ ಪೈಲಟ್ ಗಾಂಜಾ ಸೇವಿಸಿರುವುದು ಪತ್ತೆಯಾಗಿದೆ.
ಘಟನೆಯ ಗಂಭೀರತೆಯನ್ನು ಪರಿಗಣಿಸಿರುವ ಏರ್ ಇಂಡಿಯಾ, ತನ್ನ ಎಲ್ಲ ಗ್ರೂಪ್ ಪೈಲಟ್‌ಗಳನ್ನು ಮಾದಕ ದ್ರವ್ಯ ಸೇವನೆ ಪತ್ತೆ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದೆ. ಈ ಪರೀಕ್ಷೆ ಕಡ್ಡಾಯವಾಗಿದ್ದು, ಗುರುವಾರದಿಂದಲೇ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸಂಸ್ಥೆ ತನ್ನ ಉದ್ಯೋಗಿಗಳಿಗೆ ಕಳುಹಿಸಿರುವ ಇಮೇಲ್‌ನಲ್ಲಿ ತಿಳಿಸಿದೆ.
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ನಿಗದಿಪಡಿಸಿರುವ ಸುರಕ್ಷತಾ ನಿಯಮಗಳಿಗಿಂತಲೂ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಏರ್ ಇಂಡಿಯಾ ಹೇಳಿದೆ. ವಿಮಾನಯಾನದಲ್ಲಿ ಸುರಕ್ಷತೆ ಮತ್ತು ವೃತ್ತಿಪರತೆಯ ಅತ್ಯುನ್ನತ ಮಾನದಂಡಗಳನ್ನು ಕಾಯ್ದುಕೊಳ್ಳುವುದು ಹಾಗೂ ಪ್ರಯಾಣಿಕರು, ಪಾಲುದಾರರು ಮತ್ತು ಸಾರ್ವಜನಿಕರಲ್ಲಿ ಸಂಸ್ಥೆಯ ಮೇಲಿನ ನಂಬಿಕೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಅನುಮತಿಸದ ಯಾವುದೇ ಮಾದಕ ವಸ್ತು ಅಥವಾ ಔಷಧವನ್ನು ಪೈಲಟ್‌ಗಳು ಸೇವಿಸಿರುವರೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಲ್ಲ ಗ್ರೂಪ್ ಪೈಲಟ್‌ಗಳ ಸಂಪೂರ್ಣ ಪರೀಕ್ಷೆ ನಡೆಸಲಾಗುವುದು. ಇದು ಕಡ್ಡಾಯ ಪರೀಕ್ಷೆಯಾಗಿದ್ದು, ಈಗಾಗಲೇ ಜಾರಿಗೆ ಬಂದಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಏರ್ ಇಂಡಿಯಾದ ಪ್ರಕಾರ, ದಶಕಗಳಿಂದ ಸಂಸ್ಥೆ ಭಾರತೀಯ ವಿಮಾನಯಾನ ಕ್ಷೇತ್ರದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಅವಧಿಯಲ್ಲಿ ಪೈಲಟ್‌ಗಳು ಸೇರಿದಂತೆ ಸಿಬ್ಬಂದಿಯ ವೃತ್ತಿಪರತೆ, ಕೌಶಲ್ಯ ಮತ್ತು ಸುರಕ್ಷತೆಗೆ ನೀಡಿದ ಆದ್ಯತೆಯಿಂದಾಗಿ ಲಕ್ಷಾಂತರ ಪ್ರಯಾಣಿಕರು ಹಾಗೂ ಸಾರ್ವಜನಿಕರ ವಿಶ್ವಾಸವನ್ನು ಗಳಿಸಲಾಗಿದೆ.
ಪ್ರಯಾಣಿಕರು ಮತ್ತು ಸಾರ್ವಜನಿಕರು ಹೊಂದಿರುವ ಈ ವಿಶ್ವಾಸವೇ ಸಂಸ್ಥೆಯ ಅತ್ಯಂತ ಪ್ರಮುಖ ಆಸ್ತಿಯಾಗಿದೆ. ಅದನ್ನು ಯಾವುದೇ ಕಾರಣಕ್ಕೂ ಕುಂದದಂತೆ ರಕ್ಷಿಸುವುದು ಹಾಗೂ ಮುಂದುವರಿಸಿಕೊಂಡು ಹೋಗುವುದು ಸಂಸ್ಥೆಯ ಜವಾಬ್ದಾರಿಯಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.