ಬೆಂಗಳೂರು, ನ. 20: ‘ಬಸವ ಮಂಟಪ’ ಪುಸ್ತಕದಲ್ಲಿ ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ಅವಹೇಳನಕಾರಿಯಾಗಿ ಬರೆದಿರುವುದು ಖಂಡನೀಯ. ಮಹಾನ್ ಸಮಾಜ ಸುಧಾರಕನಿಗೆ ಮಾಡಿರುವ ಅವಮಾನವನ್ನು ಸರಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಎಚ್ಚರಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ವಿವಾದಿತ ಪುಸ್ತಕದ ಲೇಖಕ ರವಿ ಹಂಜ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
‘ಜಗಜ್ಯೋತಿ ಬಸವಣ್ಣನವರು ನಮ್ಮೆಲ್ಲರ ಅಸ್ಮಿತೆ. 12ನೇ ಶತಮಾನದಲ್ಲಿಯೇ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ಹೊಸ ದಿಕ್ಕು ನೀಡಿದ ಮಹಾನ್ ಚೇತನ. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಅಡಿಪಾಯ ಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದು ಹೇಳಿದ್ದಾರೆ.
ಬಸವಣ್ಣನವರ ಕಾಯಕ ತತ್ವಗಳ ಆಧಾರದಲ್ಲಿ ನಮ್ಮ ಸರಕಾರ ಜನಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಆಶಯಗಳನ್ನು ಗೌರವಿಸುತ್ತಾ ಬಂದಿದೆ. ಅವರ ತತ್ವಗಳಿಗೆ ಹಾಗೂ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನಗಳನ್ನು ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಈ ವಿವಾದದ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ನಾಡಿನ ಮಹನೀಯರನ್ನು ಅವಹೇಳನ ಮಾಡುವ ಹಾಗೂ ಸಮಾಜದ ಶಾಂತಿ ಕದಡುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ ಎಚ್ಚರಿಸಿದ್ದಾರೆ.