ಬೆಂಗಳೂರು, ಜೂ. ೩೦: ರಾಜ್ಯದಾದ್ಯಂತ ಶಾಶ್ವತ ನಿವಾಸ ಪ್ರಮಾಣಪತ್ರವನ್ನು ಸುಲಭವಾಗಿ ಹಾಗೂ ನಿಗದಿತ ಅವಧಿಯೊಳಗೆ ವಿತರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹೊಸ ಕಾರ್ಯವಿಧಾನವನ್ನು ಜಾರಿಗೆ ತಂದಿದೆ. ಈ ಕುರಿತು ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ ಕಟಾರಿಯಾ ಆದೇಶ ಹೊರಡಿಸಿದ್ದಾರೆ.
ಹೊಸ ಮಾರ್ಗಸೂಚಿಯಂತೆ ಶಾಶ್ವತ ನಿವಾಸ ಪ್ರಮಾಣಪತ್ರ ಸೇವೆಯನ್ನು ಸಕಾಲ ಸೇವೆಗಳ ಕಾಯ್ದೆಯ ವ್ಯಾಪ್ತಿಗೆ ತರಲಾಗಿದೆ. ಇದರಿಂದ ಅರ್ಹ ನಾಗರಿಕರಿಗೆ ನಿಗದಿತ ಅವಧಿಯೊಳಗೆ ಪ್ರಮಾಣಪತ್ರ ವಿತರಿಸುವ ಜವಾಬ್ದಾರಿ ಸಂಬಂಧಪಟ್ಟ ಅಧಿಕಾರಿಗಳ ಮೇಲಿದೆ.
ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗಣಕಯಂತ್ರ, ಅಂತರಜಾಲ, ಮುದ್ರಣ ಮತ್ತು ದಾಖಲೆಗಳ ನಕಲು ತೆಗೆಯುವ ಸೌಲಭ್ಯಗಳೊಂದಿಗೆ ಸಹಾಯ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ನಗರ ಪ್ರದೇಶಗಳಲ್ಲಿ ಮಹಾನಗರ ಪಾಲಿಕೆ ಆಯುಕ್ತರು ಮತ್ತು ನಗರಸಭೆಗಳ ಮುಖ್ಯಾಧಿಕಾರಿಗಳು ಈ ಕೇಂದ್ರಗಳನ್ನು ಸ್ಥಾಪಿಸಬೇಕಿದ್ದು, ಆದೇಶ ಹೊರಡಿಸಿದ ಏಳು ದಿನಗಳೊಳಗೆ ಅವು ಕಾರ್ಯಾರಂಭ ಮಾಡಬೇಕು ಎಂದು ಸೂಚಿಸಲಾಗಿದೆ.
ನಾಗರಿಕರು ಸೇವಾ ಸಿಂಧು, ಅಟಲ್ ಜನಸ್ನೇಹಿ ಕೇಂದ್ರ ಅಥವಾ ಸರ್ಕಾರ ಸೂಚಿಸುವ ಇತರೆ ಅಧಿಕೃತ ಜಾಲತಾಣಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿದ್ಯುನ್ಮಾನ ವ್ಯವಸ್ಥೆಗೆ ಒಳಪಡಿಸುವ ಮೂಲಕ ಸಾರ್ವಜನಿಕರಿಗೆ ಕಚೇರಿಗಳಿಗೆ ಅಲೆದಾಡುವ ತೊಂದರೆಯನ್ನು ತಪ್ಪಿಸುವ ಉದ್ದೇಶ ಸರ್ಕಾರದ್ದಾಗಿದೆ.
ಪ್ರಮಾಣಪತ್ರ ವಿತರಣೆಯಲ್ಲಿ ದಾಖಲೆಗಳ ಪರಿಶೀಲನೆಗಾಗಿ ಕುಟುಂಬದ ವಿವರಗಳು, ಶೈಕ್ಷಣಿಕ ದಾಖಲೆಗಳು, ನಿವಾಸ ಮಾಹಿತಿ, ಮತದಾರರ ಪಟ್ಟಿ ಸೇರಿದಂತೆ ವಿವಿಧ ಸರ್ಕಾರಿ ದಾಖಲೆಗಳ ಮಾಹಿತಿಯನ್ನು ಬಳಸಲಾಗುತ್ತದೆ. ಆದರೆ ಪ್ರಮಾಣಪತ್ರ ನೀಡುವ ಮೊದಲು ಅರ್ಜಿದಾರರ ಅರ್ಹತೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಪ್ರತ್ಯೇಕವಾಗಿ ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಈ ವ್ಯವಸ್ಥೆಯನ್ನು ರಾಷ್ಟ್ರೀಯ ಮಾಹಿತಿ ವಿಜ್ಞಾನ ಕೇಂದ್ರದ ಬೆಂಗಳೂರು ಘಟಕ ಹಾಗೂ ಆಡಳಿತ ಸುಧಾರಣೆ ಮತ್ತು ವಿದ್ಯುನ್ಮಾನ ಆಡಳಿತ ಇಲಾಖೆಯ ಸಹಯೋಗದಲ್ಲಿ ರೂಪಿಸಿ ಜಾರಿಗೆ ತರಲಾಗುತ್ತದೆ. ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆಯನ್ನು ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ ವಹಿಸಲಿದ್ದು, ಜಿಲ್ಲಾಧಿಕಾರಿಗಳು ಕಾಲಕಾಲಕ್ಕೆ ಪ್ರಗತಿ ವರದಿ ಸಲ್ಲಿಸಬೇಕಾಗಿದೆ. ಕಾರ್ಯವಿಧಾನ, ತಾಂತ್ರಿಕ ಮಾರ್ಗಸೂಚಿ, ಅರ್ಜಿ ನಮೂನೆ ಹಾಗೂ ಬಳಕೆದಾರರ ಕೈಪಿಡಿಯನ್ನು ಕಂದಾಯ ಇಲಾಖೆ ಪ್ರತ್ಯೇಕವಾಗಿ ಪ್ರಕಟಿಸಲಿದೆ. ಅನುಷ್ಠಾನಕ್ಕೆ ಸಂಬಂಧಿಸಿದ ಯಾವುದೇ ಸಂದೇಹ ಉಂಟಾದಲ್ಲಿ ಕಂದಾಯ ಇಲಾಖೆಯ ತೀರ್ಮಾನವೇ ಅಂತಿಮವಾಗಿರುತ್ತದೆ.
ಪ್ರವೇಶ, ಉದ್ಯೋಗ ನೇಮಕಾತಿ, ವಿದ್ಯಾರ್ಥಿವೇತನ, ವಿವಿಧ ಕಲ್ಯಾಣ ಯೋಜನೆಗಳು ಹಾಗೂ ಸರ್ಕಾರದ ಅನೇಕ ಸೇವೆಗಳನ್ನು ಪಡೆಯಲು ಶಾಶ್ವತ ನಿವಾಸ ಪ್ರಮಾಣಪತ್ರ ಪ್ರಮುಖ ದಾಖಲೆಯಾಗಿರುವ ಹಿನ್ನೆಲೆಯಲ್ಲಿ, ಈ ಹೊಸ ವ್ಯವಸ್ಥೆ ಸಾರ್ವಜನಿಕರಿಗೆ ಪಾರದರ್ಶಕ, ಸರಳ ಹಾಗೂ ಕಾಲಮಿತಿಯೊಳಗಿನ ಸೇವೆ ಒದಗಿಸುವ ಮಹತ್ವದ ಕ್ರಮವಾಗಿದೆ ಎಂದು ಸರ್ಕಾರ ತಿಳಿಸಿದೆ.