ಬೆಳಗಾವಿ, ಜೂ. 30: ವಿವಾಹಿತೆಯೊಬ್ಬಳು ಯುವಕನೊಂದಿಗೆ ಪರಾರಿಯಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಮಹಿಳೆಯ ಕುಟುಂಬಸ್ಥರು ಹಾಗೂ ಪತಿಯ ಕಡೆಯ ಸಂಬಂಧಿಕರು ಯುವಕನ ಮನೆ ಮೇಲೆ ಮಾರಕಾಸ್ತ್ರಗಳೊಂದಿಗೆ ದಾಳಿ ನಡೆಸಿ ಮನೆಯನ್ನು ಸಂಪೂರ್ಣ ಧ್ವಂಸಗೊಳಿಸಿರುವ ಘಟನೆ ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಘಟನೆಯ ಬಳಿಕ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸಂತ್ರಸ್ತ ಕುಟುಂಬವು ಬೆಳಗಾವಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.

ಪೊಲೀಸ್ ಮೂಲಗಳ ಪ್ರಕಾರ, ಒಂದು ವರ್ಷದ ಹಿಂದೆ ಬಸಪ್ಪ ನಾಯಕ ಅವರೊಂದಿಗೆ ನಾಗವ್ವ ವಿವಾಹವಾಗಿತ್ತು. ಬಸಪ್ಪ ನಾಯಕ ಹಾಗೂ ಯಲ್ಲಪ್ಪ ನಾಯಕ ಆತ್ಮೀಯ ಸ್ನೇಹಿತರಾಗಿದ್ದು, ಇಬ್ಬರೂ ನಾಗವ್ವ ಜತೆ ಬೆಳಗಾವಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಯಲ್ಲಪ್ಪ ಮತ್ತು ನಾಗವ್ವ ನಡುವೆ ಆತ್ಮೀಯತೆ ಬೆಳೆದಿದ್ದು, ಎರಡು ದಿನಗಳ ಹಿಂದೆ ಇಬ್ಬರೂ ಗ್ರಾಮದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಬೆಳವಣಿಗೆಯಿಂದ ಆಕ್ರೋಶಗೊಂಡ ನಾಗವ್ವ ಅವರ ಪೋಷಕರು, ಪತಿಯ ಕಡೆಯ ಸಂಬಂಧಿಕರು ಹಾಗೂ ಬೆಂಬಲಿಗರು ಸೇರಿ ನೂರಾರು ಜನರು ತಳವಾರ, ಜಂಬೆ, ಕುಡಗೋಲು, ಬಡಿಗೆ ಸೇರಿದಂತೆ ವಿವಿಧ ಮಾರಕಾಸ್ತ್ರಗಳೊಂದಿಗೆ ಯಲ್ಲಪ್ಪ ನಾಯಕ ಅವರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎನ್ನಲಾಗಿದೆ.
ದಾಳಿಕೋರರು ಮನೆಯ ಹಂಚುಗಳನ್ನು ಪುಡಿಗೈದು, ಬಾಗಿಲು-ಕಿಟಕಿಗಳನ್ನು ಧ್ವಂಸಗೊಳಿಸಿದ್ದು, ಅಲ್ಮಾರಿ, ಟಿವಿ ಸೇರಿದಂತೆ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳನ್ನು ಒಡೆದು ಹಾಕಿದ್ದಾರೆ. ಮನೆಯೊಳಗಿನ ಬಹುತೇಕ ವಸ್ತುಗಳಿಗೆ ಹಾನಿಯಾಗಿದೆ ಎಂದು ಸಂತ್ರಸ್ತ ಕುಟುಂಬ ಆರೋಪಿಸಿದೆ.
ದಾಳಿಯ ವೇಳೆ ಮನೆಯಲ್ಲಿದ್ದ ಯಲ್ಲಪ್ಪನ ತಂದೆ-ತಾಯಿ ಸೇರಿದಂತೆ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಲು ಮತ್ತು ಪ್ರಾಣಾಪಾಯ ಉಂಟುಮಾಡಲು ಯತ್ನಿಸಲಾಗಿದೆ. ಆದರೆ ಅವರು ಸ್ಥಳದಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ದಾಳಿ ನಡೆಸಿದ ಗುಂಪು ಮನೆಯಲ್ಲಿ ಇದ್ದ ಚಿನ್ನಾಭರಣ, ನಗದು ಹಣ ಹಾಗೂ ಕೊಟ್ಟಿಗೆಯಲ್ಲಿದ್ದ 25 ಕುರಿಗಳನ್ನು ದೋಚಿಕೊಂಡು ಪರಾರಿಯಾಗಿದೆ ಎಂದು ಸಂತ್ರಸ್ತ ಕುಟುಂಬ ದೂರಿನಲ್ಲಿ ಆರೋಪಿಸಿದೆ.
ಘಟನೆಯ ನಂತರ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಸಂತ್ರಸ್ತ ಕುಟುಂಬವು ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ತಮ್ಮ ಆಸ್ತಿ ನಷ್ಟ ಹಾಗೂ ಜೀವ ಬೆದರಿಕೆ ಕುರಿತು ನ್ಯಾಯ ಒದಗಿಸಬೇಕೆಂದು ಬೆಳಗಾವಿ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದಾಳಿ, ಆಸ್ತಿ ಹಾನಿ, ದರೋಡೆ ಹಾಗೂ ಇತರ ಆರೋಪಗಳ ಕುರಿತು ತನಿಖೆ ಆರಂಭಿಸಿದ್ದು, ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.