ನವದೆಹಲಿ, ಜೂ. 30: ಭಾರತೀಯ ಸೇನೆಯ 31ನೇ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್ ಮಂಗಳವಾರ ಅಧಿಕಾರ ಸ್ವೀಕರಿಸಿದರು. ಸುಮಾರು ನಾಲ್ಕು ದಶಕಗಳ ಸುದೀರ್ಘ ಸೇನಾ ಸೇವೆಯ ಬಳಿಕ ನಿವೃತ್ತಿಯಾದ ಜನರಲ್ ಉಪೇಂದ್ರ ದ್ವಿವೇದಿ ಅವರ ಉತ್ತರಾಧಿಕಾರಿಯಾಗಿ ಅವರು ದೇಶದ 13 ಲಕ್ಷಕ್ಕೂ ಅಧಿಕ ಯೋಧರನ್ನು ಒಳಗೊಂಡಿರುವ ಭಾರತೀಯ ಸೇನೆಯ ನೇತೃತ್ವ ವಹಿಸಿಕೊಂಡಿದ್ದಾರೆ.
ಜನರಲ್ ಉಪೇಂದ್ರ ದ್ವಿವೇದಿ ಅವರ ಸೇವಾವಧಿ ಮಂಗಳವಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ, ನಿಗದಿತ ವಿಧಿವಿಧಾನಗಳ ಬಳಿಕ ಜನರಲ್ ಧೀರಜ್ ಸೇಠ್ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು. ಗಡಿಭಾಗಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ಹಾಗೂ ಭಾರತೀಯ ಸೇನೆ ಸ್ವದೇಶಿ ತಂತ್ರಜ್ಞಾನ, ಆಧುನೀಕರಣ ಮತ್ತು ಯುದ್ಧ ಸನ್ನದ್ಧತೆಯತ್ತ ಹೆಚ್ಚಿನ ಗಮನ ಹರಿಸುತ್ತಿರುವ ಸಂದರ್ಭದಲ್ಲಿ ಅವರು ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ಖಡಕ್‌ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ)ಯ ಹಳೆಯ ವಿದ್ಯಾರ್ಥಿಯಾಗಿರುವ ಜನರಲ್ ಧೀರಜ್ ಸೇಠ್ ಅವರನ್ನು ಡಿಸೆಂಬರ್ 1986ರಲ್ಲಿ ಭಾರತೀಯ ಸೇನೆಯ ಆರ್ಮರ್ಡ್ ಕಾರ್ಪ್ಸ್‌ಗೆ ನಿಯೋಜಿಸಲಾಗಿತ್ತು. ಸೇನಾ ಜೀವನದ ವಿವಿಧ ಹಂತಗಳಲ್ಲಿ ಅವರು ಕಾರ್ಯಾಚರಣೆ, ತರಬೇತಿ ಹಾಗೂ ಸಿಬ್ಬಂದಿ ನಿರ್ವಹಣೆಗೆ ಸಂಬಂಧಿಸಿದ ಹಲವು ಪ್ರಮುಖ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಸೇನಾ ಮುಖ್ಯಸ್ಥರಾಗಿ ನೇಮಕವಾಗುವ ಮೊದಲು ಅವರು ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದಕ್ಕೂ ಮುನ್ನ ಪುಣೆ ಮೂಲದ ಸದರ್ನ್ ಕಮಾಂಡ್ ಹಾಗೂ ಜೈಪುರದಲ್ಲಿರುವ ಸೌತ್ ವೆಸ್ಟರ್ನ್ ಕಮಾಂಡ್‌ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಪಶ್ಚಿಮ ಗಡಿಭಾಗದ ಎರಡು ಕಾರ್ಯಾಚರಣೆಯ ಸೇನಾ ಕಮಾಂಡ್‌ಗಳಿಗೆ ನೇತೃತ್ವ ವಹಿಸಿರುವ ಕೆಲವೇ ಹಿರಿಯ ಅಧಿಕಾರಿಗಳಲ್ಲಿ ಅವರು ಒಬ್ಬರಾಗಿದ್ದಾರೆ.
ಸುಮಾರು 40 ವರ್ಷಗಳ ಸೈನಿಕ ಸೇವೆಯಲ್ಲಿ ಜನರಲ್ ಸೇಠ ವಿವಿಧ ಕಾರ್ಯಾಚರಣಾ ವಲಯಗಳಲ್ಲಿ ಎಲ್ಲ ಹಂತಗಳ ಕಮಾಂಡ್ ಹುದ್ದೆಗಳನ್ನು ನಿರ್ವಹಿಸಿದ್ದು, ಗಡಿಭದ್ರತೆ, ಯುದ್ಧತಂತ್ರ, ಸಿಬ್ಬಂದಿ ನಿರ್ವಹಣೆ ಹಾಗೂ ಸಾಮರ್ಥ್ಯ ವೃದ್ಧಿಯಲ್ಲಿ ಮಹತ್ವದ ಅನುಭವ ಹೊಂದಿದ್ದಾರೆ.
ಏಪ್ರಿಲ್ 1ರಂದು ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಅವರು ಪುಣೆ ಮೂಲದ ಸದರ್ನ್ ಕಮಾಂಡ್‌ನ ಮುಖ್ಯಸ್ಥರಾಗಿದ್ದರು. ಕಳೆದ ವರ್ಷ ನಡೆದ ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ಸದರ್ನ್ ಕಮಾಂಡ್ ಉನ್ನತ ಮಟ್ಟದ ಕಾರ್ಯಾಚರಣಾ ಸನ್ನದ್ಧತೆಯನ್ನು ಕಾಯ್ದುಕೊಂಡಿತ್ತು.
ಹೊಸ ಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್, ಸೇನೆಯ ಆಧುನೀಕರಣ, ಸ್ವದೇಶಿ ರಕ್ಷಣಾ ತಂತ್ರಜ್ಞಾನಕ್ಕೆ ಉತ್ತೇಜನ, ಗಡಿಭದ್ರತೆ ಬಲಪಡಿಸುವುದು ಹಾಗೂ ಭವಿಷ್ಯದ ಸವಾಲುಗಳಿಗೆ ಸೇನೆಯನ್ನು ಮತ್ತಷ್ಟು ಸಜ್ಜುಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸುವ ನಿರೀಕ್ಷೆ ವ್ಯಕ್ತವಾಗಿದೆ.