ಕಠ್ಮಂಡು, ಸೆ 3 : (ಸಮದರ್ಶಿ ಸುದ್ದಿ) - ನೇಪಾಳ–ಟಿಬೆಟ್ ಗಡಿ ಪ್ರದೇಶದಲ್ಲಿ ಆಗಸ್ಟ್ 26ರಂದು ಹಿಮಕುಸಿತದಿಂದ ಉಂಟಾದ ದಿಢೀರ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 1,252ಕ್ಕೆ ಏರಿಕೆಯಾಗಿದೆ. ದುರಂತ ಸಂಭವಿಸಿ ಒಂದು ವಾರ ಕಳೆದರೂ ಸುಮಾರು 4,875 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಪ್ರಾಥಮಿಕ ಅಂದಾಜಿನ ಪ್ರಕಾರ, ಪ್ರವಾಹದಿಂದ ಕನಿಷ್ಠ 7,500 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ಕೆಸರಿನಲ್ಲಿ ಮುಳುಗಿರುವ ಅಥವಾ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿರುವ ಈ ಮನೆಗಳು ಮತ್ತೆ ಬಳಕೆಗೆ ಬರುವ ಸ್ಥಿತಿಯಲ್ಲಿಲ್ಲ. ಪ್ರವಾಹಪೀಡಿತ ಪ್ರದೇಶಗಳಲ್ಲಿ ಒಟ್ಟಾರೆ ಸುಮಾರು 20,000 ಹೊಸ ಮನೆಗಳ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹದಿಂದ ಹಾನಿಗೊಳಗಾಗದೆ ನಿಂತಿರುವ ಮನೆಗಳೂ ಸುರಕ್ಷಿತವಾಗಿ ವಾಸಿಸಲು ಯೋಗ್ಯವಾಗಿಲ್ಲ ಎಂದು ರಾಷ್ಟ್ರೀಯ ವಿಪತ್ತು ಅಪಾಯ ನಿಯಂತ್ರಣ ಮತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ ಧರ್ಮರಾಜ ಉಪ್ರೇತಿ ಹೇಳಿದ್ದಾರೆ.
ಸುರಕ್ಷಿತ ಪ್ರದೇಶಗಳಲ್ಲಿ ಪುನರ್ವಸತಿ
ಒಂದೇ ಸ್ಥಳದಲ್ಲಿ ಮತ್ತೆ ಮನೆಗಳನ್ನು ನಿರ್ಮಿಸುವುದು ಸೂಕ್ತವಲ್ಲ. ಸಂತ್ರಸ್ತರನ್ನು ಮತ್ತೊಮ್ಮೆ ಇದೇ ರೀತಿಯ ಅಪಾಯಕ್ಕೆ ಸಿಲುಕಿಸುವಂತಾಗಬಾರದು ಎಂಬ ಕಾರಣಕ್ಕೆ ಸುರಕ್ಷಿತ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಹೊಸ ಮನೆಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದು ಉಪ್ರೇತಿ ತಿಳಿಸಿದ್ದಾರೆ.
ನೇಪಾಳ ಸೇನೆಯ ನೇತೃತ್ವದಲ್ಲಿ 9ನೇ ದಿನವೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಅವಶೇಷಗಳ ಅಡಿಯಿಂದ ಶವಗಳನ್ನು ಹೊರತೆಗೆಯಲಾಗುತ್ತಿದೆ. ಚಿತವಾನ್ ಜಿಲ್ಲೆಯಲ್ಲಿ 355, ನವಲ್ಪರಸಿ ಪೂರ್ವದಲ್ಲಿ 218, ನವಲ್ಪರಸಿ ಪಶ್ಚಿಮದಲ್ಲಿ 208, ನುವಾಕೊಟ್‌ನಲ್ಲಿ 177, ರಸುವಾದಲ್ಲಿ 127, ಗೊರ್ಖಾದಲ್ಲಿ 69, ಧಾಡಿಂಗ್‌ನಲ್ಲಿ 60 ಹಾಗೂ ತಹಾನು ಜಿಲ್ಲೆಯಲ್ಲಿ 38 ಶವಗಳನ್ನು ಹೊರತೆಗೆಯಲಾಗಿದೆ. ಭಾರತ ಗಡಿಯಲ್ಲಿ 18 ಶವಗಳು ಪತ್ತೆಯಾಗಿವೆ.