ಬೆಂಗಳೂರು, ಸೆ 3 : (ಸಮದರ್ಶಿ ಸುದ್ದಿ) - ಕೃಷಿಯಲ್ಲಿ ತೊಡಗಿಸಿಕೊಂಡಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ಅವಕಾಶ ಕಲ್ಪಿಸಲಾಗಿದೆ. 2026-27ನೇ ಸಾಲಿನ ವಿವಿಧ ಸಾಲ ಹಾಗೂ ಸಹಾಯಧನ ಯೋಜನೆಗಳಿಗೆ ಅರ್ಹರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ.
₹3.25 ಲಕ್ಷದವರೆಗೆ ಸಹಾಯಧನ
ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿ ವಾರ್ಷಿಕ ಆದಾಯ ₹98 ಸಾವಿರದೊಳಗಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತದೆ. ₹3.75 ಲಕ್ಷ ಘಟಕ ವೆಚ್ಚದಲ್ಲಿ ₹3.25 ಲಕ್ಷ ಸಹಾಯಧನ ನೀಡಲಾಗುತ್ತದೆ. ಅರ್ಜಿದಾರರು ಕನಿಷ್ಠ 2 ಎಕರೆ ಜಮೀನು ಹೊಂದಿರಬೇಕು.
ಹಿಂದುಳಿದ ವರ್ಗಗಳ ಪ್ರವರ್ಗ-3ಎ ಅಡಿಯಲ್ಲಿ ಬರುವ ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ನಾಮಧಾರಿ ಒಕ್ಕಲಿಗ, ಗಂಗಡ್‌ಕಾರ್, ದಾಸ್ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ, ಗೌಡ, ಕುಂಚಿಟಿಗ, ಕಾಪು, ಹೆಗ್ಗಡೆ, ಕಮ್ಮ, ರಡ್ಡಿ, ಗೌಂಡರ್, ನಾಮಧಾರಿಗೌಡ, ಉಪ್ಪಿನ ಕೊಳಗ ಸೇರಿದಂತೆ ವಿವಿಧ ಒಳಪಂಗಡಗಳ ಅರ್ಹರು ಯೋಜನೆಯ ಪ್ರಯೋಜನ ಪಡೆಯಬಹುದು.
ಇತರ ಯೋಜನೆಗಳಿಗೂ ಅರ್ಜಿ ಆಹ್ವಾನ
ಸ್ವಾವಲಂಬಿ ಸಾರಥಿ ಯೋಜನೆಯಡಿ 21ರಿಂದ 45 ವರ್ಷ ವಯಸ್ಸಿನ ಯುವಜನರು ಸ್ವಯಂ ಉದ್ಯೋಗಕ್ಕಾಗಿ ನಾಲ್ಕು ಚಕ್ರದ ವಾಹನ ಖರೀದಿಸಲು ಪಡೆಯುವ ಸಾಲಕ್ಕೆ ಶೇ.50ರಷ್ಟು, ಗರಿಷ್ಠ ₹3 ಲಕ್ಷ ಸಹಾಯಧನ ನೀಡಲಾಗುತ್ತದೆ. ಉಳಿದ ಮೊತ್ತವನ್ನು ಬ್ಯಾಂಕ್ ಸಾಲದ ಮೂಲಕ ಭರಿಸಬೇಕಾಗುತ್ತದೆ.
ಸ್ವಾತಂತ್ರ್ಯ ಅಮೃತ ಮುನ್ನಡೆ ಕೌಶಲ್ಯಾಭಿವೃದ್ಧಿ ತರಬೇತಿ ಯೋಜನೆಯಡಿ ನಿರುದ್ಯೋಗಿ ಯುವಜನರಿಗೆ ಐಟಿಐ, ಜಿಟಿಟಿಸಿ ಮತ್ತು ವಿಟಿಯು ಕೇಂದ್ರಗಳ ಮೂಲಕ ಉಚಿತ ಅಲ್ಪಾವಧಿಯ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡಲಾಗುತ್ತದೆ.
ಅರ್ಹರು ಸೇವಾ ಸಿಂಧು, ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಯಾವುದಾದರೂ ಒಂದು ಯೋಜನೆಯಡಿ ಸೌಲಭ್ಯ ಪಡೆಯಲು ಅವಕಾಶವಿದೆ.
2024-25 ಮತ್ತು 2025-26ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗದೆ ಉಳಿದಿರುವ ಅರ್ಹರು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅವರ ಹಿಂದಿನ ಅರ್ಜಿಯನ್ನೇ ಸಮಿತಿ ಪರಿಗಣಿಸಲಿದೆ ಎಂದು ನಿಗಮ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ಅಧಿಕೃತ ಜಾಲತಾಣವನ್ನು ಸಂಪರ್ಕಿಸಬಹುದು.