LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
National News

ಭಾರತದ ಆರ್ಥಿಕ ಬೆಳವಣಿಗೆ ಜಗತ್ತಿಗೆ ವಿಶ್ವಾಸದ ಮೂಲ: ಪ್ರಧಾನಿ ಮೋದಿ

ಬೆಲ್ಜಿಯಂ, ಸೆ 3 : (ಸಮದರ್ಶಿ ಸುದ್ದಿ) - ಜಗತ್ತಿನ ಹಲವು ಭಾಗಗಳಲ್ಲಿ ಸಂಘರ್ಷಗಳು ಮುಂದುವರಿದಿದ್ದು, ಆಹಾರ, ಇಂಧನ ಮತ್ತು ಪೂರೈಕೆ ಸರಪಳಿಗಳಲ್ಲಿ ಅನಿಶ್ಚಿತತೆ ಎದುರಾಗಿರುವ ನಡುವೆಯೂ ಭಾರತದ ಆರ್ಥಿಕತೆ ತನ್ನ ವೇಗವನ್ನು ಕಾಯ್ದುಕೊಂಡಿದೆ. ಕಳೆದ ತ್ರೈಮಾಸಿಕದಲ್ಲಿ ಭಾರತ ಶೇ. 7.8ರಷ್ಟು ಆರ್ಥಿಕ ಬೆಳವಣಿಗೆ ದಾಖಲಿಸಿದ್ದು, ಭಾರತದ ಬೆಳವಣಿಗೆಯ ಕಥೆ ಜಗತ್ತಿಗೆ ವಿಶ್ವಾಸ ಮತ್ತು ಹೊಸ ಅವಕಾಶಗಳ ಮೂಲವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೆವರ್ ಅವರೊಂದಿಗೆ ಗುರುವಾರ ಮಾತುಕತೆ ನಡೆಸಿದ ಬಳಿಕ ಮೋದಿ ಈ ಹೇಳಿಕೆ ನೀಡಿದ್ದಾರೆ. ಭಾರತ ಮತ್ತು ಬೆಲ್ಜಿಯಂ ವ್ಯಾಪಾರ, ರಕ್ಷಣೆ, ನಿರ್ಣಾಯಕ ಖನಿಜಗಳು, ಶುದ್ಧ ಇಂಧನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಒಪ್ಪಿಕೊಂಡಿವೆ.

ರಕ್ಷಣೆ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರ

ಭಾರತ ಮತ್ತು ಬೆಲ್ಜಿಯಂ ನಡುವಿನ ರಕ್ಷಣಾ ಹಾಗೂ ಭದ್ರತಾ ಸಹಕಾರವು ದ್ವಿಪಕ್ಷೀಯ ಸಂಬಂಧಗಳ ಪ್ರಮುಖ ಆಧಾರಸ್ತಂಭವಾಗಿದೆ ಎಂದು ಮೋದಿ ಬಣ್ಣಿಸಿದ್ದಾರೆ. ಎರಡೂ ದೇಶಗಳ ನಡುವೆ ಮಿಲಿಟರಿ ವಿನಿಮಯ ಮತ್ತು ತರಬೇತಿ ಸಹಕಾರ ಹೆಚ್ಚಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ.

ಸರ್ಕಾರಗಳು ಮತ್ತು ರಕ್ಷಣಾ ಕೈಗಾರಿಕೆಗಳ ನಡುವಿನ ಸಹಕಾರವು ರಕ್ಷಣಾ ಕ್ಷೇತ್ರದಲ್ಲಿ ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಗೆ ಹೊಸ ಅವಕಾಶಗಳನ್ನು ತೆರೆಯಲಿದೆ. ಅಪರಾಧಗಳನ್ನು ಎದುರಿಸುವ ನಿಟ್ಟಿನಲ್ಲಿ ಗುಪ್ತಚರ ಮಾಹಿತಿ ಹಂಚಿಕೆ ಹಾಗೂ ಸಂಸ್ಥೆಗಳ ನಡುವಿನ ಸಹಕಾರವನ್ನೂ ಮತ್ತಷ್ಟು ಬಲಪಡಿಸಲಾಗುವುದು ಎಂದು ಮೋದಿ ತಿಳಿಸಿದ್ದಾರೆ.

ಭಾರತ–ಯುರೋಪಿಯನ್ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದದ ತೀರ್ಮಾನವನ್ನು ಬೆಲ್ಜಿಯಂ ಪ್ರಧಾನಿ ಪ್ರಮುಖ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಸಂಬಂಧ ಹಿಂದೆಂದಿಗಿಂತಲೂ ವಿಶಾಲ ಹಾಗೂ ಕಾರ್ಯತಂತ್ರದ ಸ್ವರೂಪ ಪಡೆಯುತ್ತಿದೆ ಎಂದಿದ್ದಾರೆ.

ಎರಡೂ ದೇಶಗಳ ನಡುವಿನ ಜನರಿಂದ ಜನರ ಸಂಪರ್ಕವು ದ್ವಿಪಕ್ಷೀಯ ಸಂಬಂಧಗಳ ಪ್ರಮುಖ ಶಕ್ತಿಯಾಗಿದೆ ಎಂದು ಮೋದಿ ಹೇಳಿದ್ದಾರೆ. ಸ್ಟಾರ್ಟ್‌ಅಪ್‌ಗಳ ನಡುವಿನ ಸಂಪರ್ಕ, ಕಡಲ ವಲಯದಲ್ಲಿ ಸಾಮರ್ಥ್ಯ ವೃದ್ಧಿ, ವಿಶ್ವವಿದ್ಯಾಲಯ ಹಾಗೂ ಸಂಶೋಧನಾ ಸಹಕಾರವನ್ನು ಹೆಚ್ಚಿಸಲು ಎರಡೂ ದೇಶಗಳು ನಿರ್ಧರಿಸಿವೆ.

ಪ್ರತಿಭಾ ಚಲನೆಗೆ ಅನುಕೂಲವಾಗುವಂತೆ ಭಾರತ ಮತ್ತು ಬೆಲ್ಜಿಯಂ ಶೀಘ್ರದಲ್ಲೇ ‘ವಲಸೆ ಮತ್ತು ಚಲನಶೀಲತೆ ಪಾಲುದಾರಿಕೆ ಒಪ್ಪಂದ’ವನ್ನು ಅಂತಿಮಗೊಳಿಸಲಿವೆ ಎಂದು ಮೋದಿ ತಿಳಿಸಿದ್ದಾರೆ.

ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದ ಸಂಘರ್ಷಗಳಿಗೆ ಸಂವಾದ ಹಾಗೂ ರಾಜತಾಂತ್ರಿಕತೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಪುನರುಚ್ಚರಿಸಿದ ಮೋದಿ, ಶಾಂತಿ ಮತ್ತು ಸಂಘರ್ಷಗಳ ಶೀಘ್ರ ಅಂತ್ಯಕ್ಕಾಗಿ ಎಲ್ಲ ಪ್ರಯತ್ನಗಳನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಭಾರತ ಮತ್ತು ಬೆಲ್ಜಿಯಂ ಎಲ್ಲ ರೀತಿಯ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಬದ್ಧವಾಗಿವೆ ಎಂದೂ ಅವರು ತಿಳಿಸಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST