ಹೊಸದಿಲ್ಲಿ, ಸೆ 1 : (ಸಮದರ್ಶಿ ಸುದ್ದಿ) - ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಇತ್ತೀಚಿನ ಜಿಡಿಪಿ ಅಂಕಿಅಂಶಗಳು ವಾಸ್ತವ ಆರ್ಥಿಕ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತಿಲ್ಲ. ಕೇವಲ ಅಂಕಿಅಂಶಗಳ ಕಸರತ್ತು ನಡೆಸಿ ದೇಶದ ದುರ್ಬಲ ಆರ್ಥಿಕತೆಯನ್ನು ಮರೆಮಾಚುವ ಪ್ರಯತ್ನ ಮಾಡಲಾಗಿದೆ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ.
‘ಮೇಕ್ ಇನ್ ಇಂಡಿಯಾ’ ಯೋಜನೆಯ ಸಾಧನೆ ಅಷ್ಟಕ್ಕಷ್ಟೇ. ಆದರೆ ಮೋದಿ ಸರ್ಕಾರದ ‘ಫೇಕ್ ಇನ್ ಇಂಡಿಯಾ’ ಮಾತ್ರ ನಿರಂತರವಾಗಿ ನಡೆಯುತ್ತಿದೆ ಎಂದು ಕಾಂಗ್ರೆಸ್‌ನ ಸಂವಹನ ವಿಭಾಗದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಪದೇಪದೇ ವಿಧಾನಗಳನ್ನು ಬದಲಾಯಿಸುವ ಮೂಲಕ ಜಿಡಿಪಿ ದತ್ತಾಂಶವನ್ನು ಸರ್ಕಾರಕ್ಕೆ ಅನುಕೂಲವಾಗುವಂತೆ ರೂಪಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಸರ್ಕಾರ ಪ್ರಾಮಾಣಿಕ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದರೆ ನೈಜ ಆರ್ಥಿಕ ಬೆಳವಣಿಗೆ ದರ ಇನ್ನೂ ಕಡಿಮೆಯಾಗಿರುತ್ತಿತ್ತು ಎಂದು ಹೇಳಿದ್ದಾರೆ.
ನಾಮಮಾತ್ರದ ಜಿಡಿಪಿ ಮತ್ತು ನೈಜ ಜಿಡಿಪಿ ನಡುವಿನ ವ್ಯತ್ಯಾಸವು ಹಣದುಬ್ಬರವನ್ನು ಪ್ರತಿಬಿಂಬಿಸಬೇಕು. ಆದರೆ ಸರ್ಕಾರದ ಅಂಕಿಅಂಶಗಳ ಪ್ರಕಾರ ಈ ವ್ಯತ್ಯಾಸ ಕೇವಲ ಶೇ.2.3ರಷ್ಟಿದೆ. ಇದೇ ಅವಧಿಯಲ್ಲಿ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರ ಶೇ.9ಕ್ಕಿಂತ ಹೆಚ್ಚಾಗಿದೆ. ಇದು ಸ್ಪಷ್ಟ ವೈರುಧ್ಯವಾಗಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
‘ಉತ್ಪಾದನಾ ವಲಯದ ಪಾಲು ಶೇ.13ಕ್ಕಿಂತ ಕಡಿಮೆ’
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಸಲ್ಮಾನ್ ಸೋಜ್, ಪ್ರಧಾನಿ ನರೇಂದ್ರ ಮೋದಿ ವಾಸ್ತವಿಕ ಆರ್ಥಿಕ ಪರಿಸ್ಥಿತಿಯಿಂದ ದೂರವಾಗಿದ್ದಾರೆ ಎಂದು ಟೀಕಿಸಿದರು.
ದೇಶದಲ್ಲಿ ಚಿಲ್ಲರೆ ಹಣದುಬ್ಬರ ಶೇ.3.9ರಷ್ಟಿದ್ದರೂ ಸರ್ಕಾರ ಅದನ್ನು ಕಡಿಮೆ ಪ್ರಮಾಣವೆಂದು ಬಿಂಬಿಸುತ್ತಿದೆ. ‘ಮೇಕ್ ಇನ್ ಇಂಡಿಯಾ’ ಆರಂಭವಾಗಿ 10 ವರ್ಷ ಕಳೆದಿದ್ದರೂ ಜಿಡಿಪಿಯಲ್ಲಿ ಉತ್ಪಾದನಾ ವಲಯದ ಪಾಲು ಶೇ.13ಕ್ಕಿಂತ ಕಡಿಮೆಯಿದೆ ಎಂದು ಹೇಳಿದರು.
‘ವೋಕಲ್ ಫಾರ್ ಲೋಕಲ್’ ಅಭಿಯಾನ ನಡೆಸಲಾಗುತ್ತಿದ್ದರೂ ಚೀನಾದೊಂದಿಗಿನ ಭಾರತದ ವ್ಯಾಪಾರ ಕೊರತೆ 112 ಬಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟಿದೆ ಎಂದು ಸಲ್ಮಾನ್ ಸೋಜ್ ಹೇಳಿದರು.
ಪ್ರಧಾನಿ ಮೋದಿ ಆತ್ಮನಿರ್ಭರ ಭಾರತದ ಬಗ್ಗೆ ಮಾತನಾಡುತ್ತಾರೆ. ಆದರೆ 2018ರಿಂದ ದೇಶದ ಆಯಕಟ್ಟಿನ ಪೆಟ್ರೋಲಿಯಂ ಮೀಸಲು ಸಾಮರ್ಥ್ಯದಲ್ಲಿ ಯಾವುದೇ ಹೆಚ್ಚಳವಾಗಿಲ್ಲ ಎಂದು ಅವರು ಟೀಕಿಸಿದರು.
ಜಿಡಿಪಿ ಬೆಳವಣಿಗೆ ಉತ್ತಮವಾಗಿದೆ ಎಂದು ಸರ್ಕಾರ ಹೇಳುತ್ತಿರುವುದಾದರೆ, ದೇಶದ ಕುಟುಂಬಗಳು ಇನ್ನೂ ಸಾಲ ಮಾಡುತ್ತಿರುವುದೇಕೆ? ಗ್ರಾಮೀಣ ಪ್ರದೇಶದ ವೇತನಗಳು ಹಣದುಬ್ಬರಕ್ಕಿಂತ ವೇಗವಾಗಿ ಏಕೆ ಏರುತ್ತಿಲ್ಲ? ಖಾಸಗಿ ಹೂಡಿಕೆ ಏಕೆ ಕುಂಠಿತವಾಗಿದೆ? ಜಿಡಿಪಿಯಲ್ಲಿ ನಿವ್ವಳ ವಿದೇಶಿ ನೇರ ಹೂಡಿಕೆಯ ಪಾಲು ಶೂನ್ಯಕ್ಕೆ ಏಕೆ ತಲುಪಿದೆ? ಯುವ ನಿರುದ್ಯೋಗ ದರ ಶೇ.16ರಷ್ಟಿರುವುದೇಕೆ? ಎಂದು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರು.
2026ರಲ್ಲೇ ಭಾರತದ ಷೇರು ಮಾರುಕಟ್ಟೆಯಿಂದ ಸುಮಾರು 250 ಲಕ್ಷ ಕೋಟಿ ರೂ.ಗಳಷ್ಟು ಹಣ ಹಿಂತೆಗೆದುಕೊಳ್ಳಲಾಗಿದೆ ಎಂದು ಹೇಳಿದ ಅವರು, ಆರ್ಥಿಕ ಬೆಳವಣಿಗೆ ಉತ್ತಮವಾಗಿದ್ದರೆ ಹೂಡಿಕೆದಾರರು ಹಣ ಹಿಂಪಡೆಯುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಡಾಲರ್ ಎದುರು ರೂಪಾಯಿ ಮೌಲ್ಯ 58ರಷ್ಟಿದ್ದಾಗ ಬಿಜೆಪಿ ಟೀಕಿಸಿತ್ತು. ಇದೀಗ ರೂಪಾಯಿ ಮೌಲ್ಯ 95ಕ್ಕೆ ಕುಸಿದಿದೆ. ಇದನ್ನು ಉತ್ತಮ ಆರ್ಥಿಕತೆಯ ಲಕ್ಷಣವೆಂದು ಹೇಗೆ ಹೇಳಲು ಸಾಧ್ಯ ಎಂದು ಸಲ್ಮಾನ ಸೋಜ್ ಪ್ರಶ್ನಿಸಿದರು.
ಕೇಂದ್ರ ಸರ್ಕಾರದ ಪ್ರಕಾರ, ಏಪ್ರಿಲ್‌ನಿಂದ ಜೂನ್‌ವರೆಗಿನ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಶೇ.7.8ರಷ್ಟು ಬೆಳವಣಿಗೆ ದಾಖಲಿಸಿದೆ. ಇರಾನ್‌ನಲ್ಲಿನ ಯುದ್ಧ ಹಾಗೂ ಅದರಿಂದ ಉಂಟಾದ ಜಾಗತಿಕ ಅನಿಶ್ಚಿತತೆಯ ನಡುವೆಯೂ ದೇಶೀಯ ಆರ್ಥಿಕ ಚಟುವಟಿಕೆ ಚೇತರಿಕೆ ಕಂಡಿದೆ ಎಂದು ಸರ್ಕಾರ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಜಿಡಿಪಿ ಬೆಳವಣಿಗೆಯನ್ನು ‘ಅತ್ಯಂತ ಬೃಹತ್ ಸಾಧನೆ’ ಎಂದು ಬಣ್ಣಿಸಿದ್ದಾರೆ. ಆದರೆ ಜಿಡಿಪಿ ಅಂಕಿಅಂಶಗಳ ಹಿಂದೆ ಇರುವ ವಾಸ್ತವ ಆರ್ಥಿಕ ಪರಿಸ್ಥಿತಿಯನ್ನು ಸರ್ಕಾರ ಮರೆಮಾಚುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.