ಮಾಲೆ, ಮೇ 16 : ಕೇವ್ ಸ್ಕೂಬಾ ಡೈವಿಂಗ್ ನಡೆಸುವ ವೇಳೆ ಇಟಲಿಯ ಐವರು ಪ್ರಜೆಗಳು ಮೃತಪಟ್ಟಿರುವ ಘಟನೆ ಗುರುವಾರ ಮಾಲ್ಡೀವ್ಸ್‌ನಲ್ಲಿ ನಡೆದಿದೆ. ಮಾಲ್ಡೀವ್ಸ್ ಇತಿಹಾಸದಲ್ಲೇ ಇದು ಅತಿ ದೊಡ್ಡ ಡೈವಿಂಗ್ ದುರಂತಗಳಲ್ಲಿ ಒಂದಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಇದುವರೆಗೆ ಕೇವಲ ಒಂದು ಮೃತದೇಹವನ್ನು ಮಾತ್ರ ವಶಪಡಿಸಿಕೊಳ್ಳಲಾಗಿದ್ದು, ಹವಾಮಾನ ವೈಪರೀತ್ಯದಿಂದ ಉಳಿದ ಮೃತದೇಹಗಳ ಶೋಧ ಕಾರ್ಯಕ್ಕೆ ತೊಡಕು ಉಂಟಾಗಿದೆ. ಶನಿವಾರವೂ ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐವರು ಡೈವರ್‌ಗಳು ವಾವು ಅಟಾಲ್ ಪ್ರದೇಶದಲ್ಲಿ ಸುಮಾರು 50 ಮೀಟರ್ ಆಳದಲ್ಲಿರುವ ನೀರಿನೊಳಗಿನ ಗುಹೆಗಳನ್ನು ಪರಿಶೀಲಿಸಲು ಸಮುದ್ರಕ್ಕೆ ಇಳಿದಿದ್ದರು. ಆದರೆ ಬಳಿಕ ಅವರು ನೀರಿನಿಂದ ಹೊರಬಂದಿಲ್ಲ ಎಂದು ತಿಳಿದುಬಂದಿದೆ. ಸಾವಿನ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.
ಮೃತರನ್ನು ಮೋನಿಕಾ ಮಾಂಟೆಫಾಲ್ಕೋನ್, ಜಾರ್ಜಿಯಾ ಸೊಮ್ಮಕಾಲ್, ಫೆಡೆರಿಕೊ ಗ್ವಾಲ್ಟಿಯೆರಿ, ಮುರಿಯೆಲ್ ಒಡ್ಡೆನಿನೊ ಹಾಗೂ ಗಿಯಾನ್ಲುಕಾ ಬೆನೆಡೆಟ್ಟಿ ಎಂದು ಗುರುತಿಸಲಾಗಿದೆ. ಅವರು ತಮ್ಮ ಶೋಧ ಕಾರ್ಯಕ್ಕಾಗಿ ಯಾಚ್ ಹಾಗೂ ಡ್ಯೂಕ್ ಆಫ್ ಆರ್ಕ್ ಹೆಸರಿನ ದೋಣಿಯನ್ನು ಬಳಸುತ್ತಿದ್ದರು ಎಂದು ಮಾಲ್ಡೀವ್ಸ್ ಸರಕಾರ ತಿಳಿಸಿದೆ.
ಮೃತರ ಪೈಕಿ ನಾಲ್ವರು ಬೆನೆಡೆಟ್ಟಿಯ ಜಿನೋವಾ ವಿಶ್ವವಿದ್ಯಾಲಯದೊಂದಿಗೆ ಸಂಪರ್ಕ ಹೊಂದಿದ್ದರು. ಐದನೇ ವ್ಯಕ್ತಿ ಡ್ಯೂಕ್ ಆಫ್ ಆರ್ಕ್ ದೋಣಿಯ ಚಾಲಕರಾಗಿದ್ದು, ಇದುವರೆಗೆ ಅವರ ಮೃತದೇಹ ಮಾತ್ರ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಮೋನಿಕಾ ಮಾಂಟೆಫಾಲ್ಕೋನ್ ಜಿನೋವಾ ವಿಶ್ವವಿದ್ಯಾಲಯದಲ್ಲಿ ಸಾಗರ ಜೀವವಿಜ್ಞಾನ, ಉಷ್ಣವಲಯ ಸಮುದ್ರ ಪರಿಸರ ವಿಜ್ಞಾನ ಹಾಗೂ ಆಳ ಸಮುದ್ರ ವಿಜ್ಞಾನದ ಪ್ರಾಧ್ಯಾಪಕರಾಗಿದ್ದರು. ಅವರು ಮಾಲ್ಡೀವ್ಸ್‌ನ ದ್ವೀಪವೊಂದರ ನಿಗಾವಣೆ ಅಭಿಯಾನದ ವೈಜ್ಞಾನಿಕ ನಿರ್ದೇಶಕರಾಗಿದ್ದರು ಎಂದು ಇಟಲಿ ಮಾಧ್ಯಮಗಳು ವರದಿ ಮಾಡಿವೆ.
ಅವರ ಪುತ್ರಿಯೂ ಸಮುದ್ರ ಹಾಗೂ ಡೈವಿಂಗ್ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, ಅದೇ ವಿಶ್ವವಿದ್ಯಾಲಯದಲ್ಲಿ ಜೈವಿಕ ವೈದ್ಯಕೀಯ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ್ದರು ಎಂದು ಡೈಲಿ ಮೇಲ್ ವರದಿ ತಿಳಿಸಿದೆ.
31 ವರ್ಷದ ಒಡ್ಡೆನಿನೊ ಸಾಗರ ಜೀವವಿಜ್ಞಾನ ಹಾಗೂ ಪರಿಸರ ವಿಜ್ಞಾನಿಯಾಗಿದ್ದರೆ, 31 ವರ್ಷದ ಗ್ವಾಲ್ಟಿಯೆರಿ ಇತ್ತೀಚೆಗಷ್ಟೇ ಸಾಗರ ಜೀವವಿಜ್ಞಾನ ಮತ್ತು ಪರಿಸರ ವಿಜ್ಞಾನದಲ್ಲಿ ಪದವಿ ಪಡೆದಿದ್ದರು. ಅವರು ಮಾನ್ಯತೆ ಪಡೆದ ಸ್ಕೂಬಾ ಡೈವಿಂಗ್ ತರಬೇತುದಾರರಾಗಿದ್ದರು. 44 ವರ್ಷದ ಬೆನೆಡೆಟ್ಟಿ ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದ ವೃತ್ತಿಪರರಾಗಿದ್ದರು ಎಂದು ವರದಿಯಾಗಿದೆ.
ಈ ಐವರ ಸಾವಿಗೆ ವಿವಿಧ ಕಾರಣಗಳನ್ನು ಶಂಕಿಸಲಾಗುತ್ತಿದ್ದು, ವಿಷಪೂರಿತ ಆಮ್ಲಜನಕ ಬಳಕೆಯೂ ಕಾರಣವಾಗಿರಬಹುದೆಂದು ಬಿಬಿಸಿ ವರದಿ ಉಲ್ಲೇಖಿಸಿದೆ.