ಬೆಳ್ತಂಗಡಿ, 15: ರಾಜ್ಯದ ಗಮನ ಸೆಳೆದಿದ್ದ ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ಸುಮಾರು ಒಂದು ವರ್ಷದ ತನಿಖೆ ಪೂರ್ಣಗೊಳಿಸಿ, 7,000ಕ್ಕೂ ಹೆಚ್ಚು ಪುಟಗಳ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ತನಿಖೆ ವೇಳೆ ಸಂಗ್ರಹಿಸಲಾದ ದಾಖಲೆಗಳು, ಸಾಕ್ಷ್ಯಾಧಾರಗಳು, ವಿಧಿವಿಜ್ಞಾನ ವರದಿಗಳು ಹಾಗೂ ಇತರ ದಾಖಲೆಗಳನ್ನು ವರದಿಯೊಂದಿಗೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಧರ್ಮಸ್ಥಳ ಹಾಗೂ ಸುತ್ತಮುತ್ತ ನಡೆದಿವೆ ಎನ್ನಲಾದ ಸಾಮೂಹಿಕ ಅಂತ್ಯಕ್ರಿಯೆಗಳು, ಲೈಂಗಿಕ ದೌರ್ಜನ್ಯ, ಕೊಲೆ ಹಾಗೂ ಪ್ರಕರಣಗಳನ್ನು ಮುಚ್ಚಿಹಾಕಿರುವ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 20 ಸದಸ್ಯರ ಎಸ್‌ಐಟಿ ರಚಿಸಿತ್ತು.
ಪ್ರಕರಣದ ಆರಂಭಿಕ ಹಂತದಲ್ಲಿ ಮಾಜಿ ನೈರ್ಮಲ್ಯ ಕಾರ್ಮಿಕ ಸಿ.ಎನ್. ಚಿನ್ನಯ್ಯ, 1995ರಿಂದ 2014ರ ನಡುವೆ ಹಲವು ಮಹಿಳೆಯರು ಹಾಗೂ ಅಪ್ರಾಪ್ತರ ಶವಗಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ತಮ್ಮನ್ನು ಒತ್ತಾಯಿಸಲಾಗಿತ್ತು ಎಂದು ಆರೋಪಿಸಿದ್ದರು. ತನಿಖೆಯ ಭಾಗವಾಗಿ ಎಸ್‌ಐಟಿ 15 ಸ್ಥಳಗಳಲ್ಲಿ ಉತ್ಖನನ ನಡೆಸಿ ಅಸ್ಥಿಪಂಜರದ ಅವಶೇಷಗಳು ಹಾಗೂ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿತ್ತು.
ಬಳಿಕ ಚಿನ್ನಯ್ಯ ಅವರ ಹೇಳಿಕೆಗಳಲ್ಲಿ ಅಸಂಗತತೆ ಕಂಡುಬಂದ ಹಿನ್ನೆಲೆಯಲ್ಲಿ ಸುಳ್ಳು ಸಾಕ್ಷ್ಯ ನೀಡಿದ ಆರೋಪದಡಿ ಅವರನ್ನು ಬಂಧಿಸಲಾಗಿತ್ತು. ನಂತರ ಅವರು ಕರ್ನಾಟಕ ಹೈಕೋರ್ಟ ಮೊರೆ ಹೋಗಿ, ತಮ್ಮ ಮೇಲೆ ಒತ್ತಡ ಹೇರಿ ಆರೋಪ ಮಾಡಿಸಲಾಗಿತ್ತು ಎಂದು ಹೇಳಿಕೆ ನೀಡಿದ್ದರು. ಬಳಿಕ ಅವರಿಗೆ ಜಾಮೀನು ದೊರೆತಿತ್ತು.
ಎಸ್‌ಐಟಿ ಸಲ್ಲಿಸಿರುವ ಅಂತಿಮ ವರದಿಯನ್ನು ಪರಿಶೀಲಿಸಿದ ಬಳಿಕ ಮುಂದಿನ ಕಾನೂನು ಕ್ರಮಗಳ ಕುರಿತು ನ್ಯಾಯಾಲಯ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ.