ಹೊಸದಿಲ್ಲಿ, ನ. 26: ಪ್ರತಿಯೊಂದು ಭಿನ್ನಾಭಿಪ್ರಾಯವನ್ನೂ ತನ್ನ ಅಧಿಕಾರಕ್ಕೆ ಎದುರಾದ ಸವಾಲು ಎಂದು ಪರಿಗಣಿಸದೆ, ಟೀಕೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಆತ್ಮವಿಶ್ವಾಸವುಳ್ಳ ಸಂಸ್ಥೆ ಹೊಂದಿರಬೇಕು. ಸ್ವತಂತ್ರ, ನಿಷ್ಪಕ್ಷಪಾತ ಮತ್ತು ಸ್ಥಿರ ಕಾರ್ಯವೈಖರಿಯ ಮೂಲಕ ನ್ಯಾಯಾಂಗವು ಸಾರ್ವಜನಿಕ ವಿಶ್ವಾಸವನ್ನು ನಿರಂತರವಾಗಿ ಗಳಿಸಿಕೊಳ್ಳಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ.
ಸುಪ್ರೀಂ ಕೋರ್ಟ ಆವರಣದಲ್ಲಿ ಸುಪ್ರೀಂ ಕೋರ್ಟ ವಕೀಲರ ಸಂಘ ಗುರುವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ದೌರ್ಬಲ್ಯದ ಸಂಕೇತವಲ್ಲ ಎಂದು ಪ್ರತಿಪಾದಿಸಿದರು.
ಸಂವಿಧಾನ ಕೇವಲ ರಾಜಕೀಯ ಅಥವಾ ಸಾಂಸ್ಥಿಕ ಬಿಕ್ಕಟ್ಟುಗಳ ಸಂದರ್ಭದಲ್ಲಿ ಮಾತ್ರವಲ್ಲದೆ ಪ್ರತಿದಿನವೂ ಪರೀಕ್ಷೆಗೆ ಒಳಗಾಗುತ್ತದೆ. ಅಧಿಕಾರ ಚಲಾಯಿಸುವಾಗ ದುರ್ಬಲ ನಾಗರಿಕರನ್ನು ನಡೆಸಿಕೊಳ್ಳುವ ರೀತಿ, ಸಂಸ್ಥೆಗಳು ತಮ್ಮ ಅಧಿಕಾರದ ಮಿತಿಯನ್ನು ಒಪ್ಪಿಕೊಳ್ಳುವ ಮನೋಭಾವ ಹಾಗೂ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಸಿದ್ಧತೆಯು ಸಾಂವಿಧಾನಿಕ ಬದ್ಧತೆಯ ಪ್ರತೀಕಗಳಾಗಿವೆ ಎಂದರು.
ಟೀಕೆಗಳನ್ನು ತಾರ್ಕಿಕವಾಗಿ, ವೃತ್ತಿಪರ ಪ್ರಾಮಾಣಿಕತೆಯಿಂದ ಹಾಗೂ ಸಾಂಸ್ಥಿಕ ಪ್ರಕ್ರಿಯೆಗಳಿಗೆ ಗೌರವ ನೀಡುವ ಮೂಲಕ ಎದುರಿಸಬೇಕು. ನಿರ್ದಿಷ್ಟ ಸನ್ನಿವೇಶದಲ್ಲಿ ಸಂಸ್ಥೆಯ ನಿರ್ಧಾರ ತಮಗೆ ಅನುಕೂಲಕರವಾಗಿಲ್ಲ ಎಂಬ ಕಾರಣಕ್ಕೆ ರಾಜಕೀಯ ಉದ್ದೇಶ ಅಥವಾ ವೈಯಕ್ತಿಕ ಲಾಭಕ್ಕಾಗಿ ಸಂಸ್ಥೆಯ ಮೇಲೆ ದಾಳಿ ನಡೆಸಬಾರದು ಎಂದು ಹೇಳಿದರು.
ಸಂವಿಧಾನದ ನಿಬಂಧನೆಗಳು, ಸಂಸ್ಥೆಗಳು ಮತ್ತು ಅಧಿಕಾರ ಹಂಚಿಕೆ ಅದರ ಮೂಲ ಅಡಿಪಾಯಗಳಾಗಿವೆ. ಆದರೆ ಸಂವಿಧಾನದ ನಿಜವಾದ ಮಹತ್ವವನ್ನು ಅದು ಜನರ ಬದುಕಿನ ಮೇಲೆ ಬೀರುವ ಪರಿಣಾಮದ ಆಧಾರದಲ್ಲಿ ನಿರ್ಣಯಿಸಬೇಕು ಎಂದರು.
ಪ್ರತಿಯೊಂದು ಸಂಸ್ಥೆಯೂ ತನಗಿರುವ ಅಧಿಕಾರದ ಜತೆಗೆ ಅದರ ಮಿತಿಗಳ ಬಗ್ಗೆಯೂ ಅರಿವು ಹೊಂದಿರಬೇಕು. ಸಾಂವಿಧಾನಿಕ ಪ್ರಜಾಪ್ರಭುತ್ವದ ಸಮರ್ಪಕ ಕಾರ್ಯನಿರ್ವಹಣೆಗೆ ಸಾಂಸ್ಥಿಕ ಸಂಯಮ, ಪರಸ್ಪರ ಗೌರವ ಮತ್ತು ಹೊಣೆಗಾರಿಕೆ ಅತ್ಯಗತ್ಯ. ಇತರ ಸಂಸ್ಥೆಗಳ ಸಾಂವಿಧಾನಿಕ ಕಾರ್ಯವ್ಯಾಪ್ತಿಯನ್ನು ಗೌರವಿಸುತ್ತಲೇ ಪ್ರತಿಯೊಂದು ಸಂಸ್ಥೆಯೂ ತನ್ನ ಜವಾಬ್ದಾರಿ ನಿರ್ವಹಿಸಬೇಕು ಎಂದು ತಿಳಿಸಿದರು.
ಸಂವಿಧಾನದ ಬಲವನ್ನು ಅದು ಸ್ಥಾಪಿಸಿರುವ ಸಂಸ್ಥೆಗಳಿಂದಷ್ಟೇ ಅಲ್ಲದೆ ನಾಗರಿಕರಲ್ಲಿ ಮೂಡಿಸುವ ವಿಶ್ವಾಸದಿಂದಲೂ ಅಳೆಯಲಾಗುತ್ತದೆ. ನ್ಯಾಯಾಂಗದ ಅಧಿಕಾರದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಸ್ವತಂತ್ರ ಮತ್ತು ನಿಷ್ಪಕ್ಷಪಾತ ಕಾರ್ಯನಿರ್ವಹಣೆಯ ಮೂಲಕ ನಿರಂತರವಾಗಿ ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರತಿ ಪ್ರಕರಣದ ಹಿಂದೆಯೂ ವ್ಯಕ್ತಿಯೊಬ್ಬರಿದ್ದಾರೆ
ಬಾಕಿ ಪ್ರಕರಣಗಳು, ನ್ಯಾಯದಾನದಲ್ಲಿನ ವಿಳಂಬ ಹಾಗೂ ಕಾನೂನು ನೆರವಿನ ಅಸಮಾನ ಲಭ್ಯತೆಯು ನಾಗರಿಕರ ನ್ಯಾಯಾಂಗದ ಅನುಭವದ ಮೇಲೆ ಪರಿಣಾಮ ಬೀರುತ್ತಿವೆ ಎಂದು ಮುಖ್ಯ ನ್ಯಾಯಮೂರ್ತಿ ಕಳವಳ ವ್ಯಕ್ತಪಡಿಸಿದರು.
ಪ್ರತಿಯೊಂದು ಪ್ರಕರಣದ ಸಂಖ್ಯೆಯ ಹಿಂದೆಯೂ ವಿವಾದದ ಇತ್ಯರ್ಥ, ಹಕ್ಕುಗಳ ರಕ್ಷಣೆ ಅಥವಾ ನ್ಯಾಯಕ್ಕಾಗಿ ಕಾಯುತ್ತಿರುವ ವ್ಯಕ್ತಿಯೊಬ್ಬರಿದ್ದಾರೆ. ಈ ಪರಿಸ್ಥಿತಿಯನ್ನು ಸುಧಾರಿಸುವುದು ಎಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದರು.
ಕೋರ್ಟಗಳು ತಮ್ಮ ಕಾರ್ಯವಿಧಾನಗಳನ್ನು ಬಲಪಡಿಸಿ ನ್ಯಾಯದಾನವನ್ನು ಜನರಿಗೆ ಮತ್ತಷ್ಟು ಸುಲಭವಾಗಿ ತಲುಪಿಸಬೇಕು. ವಕೀಲರು ಪ್ರಾಮಾಣಿಕ ವಕಾಲತ್ತು, ಜವಾಬ್ದಾರಿಯುತ ಪ್ರಕರಣ ನಿರ್ವಹಣೆ ಹಾಗೂ ವೃತ್ತಿಪರ ಶಿಸ್ತಿನ ಮೂಲಕ ಇದಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಸಂವಿಧಾನದ ಭರವಸೆಗಳಿಗೆ ಜೀವ ತುಂಬಬೇಕು
ಸಂವಿಧಾನ ಶಿಲ್ಪಿಗಳಿಗೆ ಸಲ್ಲಿಸುವ ನಿಜವಾದ ಗೌರವವೆಂದರೆ ಕೇವಲ ಅವರ ಸಾಧನೆಗಳನ್ನು ಸ್ಮರಿಸುವುದಲ್ಲ, ಅವರು ನಮಗೆ ವಹಿಸಿರುವ ಸಾಂವಿಧಾನಿಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವುದು ಎಂದು ಹೇಳಿದರು.
ನಾಗರಿಕರಿಗೆ ಪ್ರತಿಯೊಂದು ತೀರ್ಪು ನೆನಪಿರಲಿಕ್ಕಿಲ್ಲ. ಸಂವಿಧಾನದ ಎಲ್ಲ ನಿಬಂಧನೆಗಳ ಪರಿಚಯವೂ ಇರಲಿಕ್ಕಿಲ್ಲ. ಆದರೆ ತಮ್ಮ ಅಹವಾಲನ್ನು ಆಲಿಸಲಾಯಿತೇ, ತಮ್ಮನ್ನು ನ್ಯಾಯಯುತವಾಗಿ ನಡೆಸಿಕೊಳ್ಳಲಾಯಿತೇ ಹಾಗೂ ಸಂಕಷ್ಟದ ಸಂದರ್ಭದಲ್ಲಿ ನ್ಯಾಯಾಂಗ ತಮ್ಮ ಬೆಂಬಲಕ್ಕೆ ನಿಂತಿತೇ ಎಂಬುದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಇದೇ ನಮ್ಮ ಸಾಂವಿಧಾನಿಕ ಬದ್ಧತೆಯ ನಿಜವಾದ ಮಾನದಂಡವಾಗಿದೆ ಎಂದರು.
ಕಾರ್ಯನಿರ್ವಹಣೆಯಲ್ಲಿ ಸ್ವತಂತ್ರವಾಗಿರುವ, ಎಲ್ಲರಿಗೂ ಸುಲಭವಾಗಿ ತಲುಪುವ ಹಾಗೂ ಮಾನವೀಯ ಧೋರಣೆ ಹೊಂದಿರುವ ನ್ಯಾಯ ವ್ಯವಸ್ಥೆಯನ್ನು ರೂಪಿಸಲು ಶ್ರಮಿಸಬೇಕು. ಸಂವಿಧಾನ ನಮಗೆ ಚೌಕಟ್ಟು ನೀಡಿದ್ದು, ಅದರ ಭರವಸೆಗಳಿಗೆ ಜೀವ ತುಂಬುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಸೂರ್ಯ ಕಾಂತ್ ತಿಳಿಸಿದರು.
ಅಟಾರ್ನಿ ಜನರಲ್, ಸುಪ್ರೀಂ ಕೋರ್ಟ ವಕೀಲರ ಸಂಘದ ಅಧ್ಯಕ್ಷ ಹಾಗೂ ಹಿರಿಯ ವಕೀಲ ಪ್ರದೀಪ ಕುಮಾರ ರೈ ಮತ್ತಿತರರು ಮಾತನಾಡಿದರು.