ಹೊಸದಿಲ್ಲಿ, ನ. 26: ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಸಂವಿಧಾನ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ ಸೋಲು ಕಾಣಲು ಪ್ರಮುಖ ಪ್ರತಿಪಕ್ಷವೊಂದೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಮಹಿಳೆಯರಿಗೆ ನ್ಯಾಯ ಒದಗಿಸುವ ಸರ್ಕಾರದ ಪ್ರಯತ್ನವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಗುರುವಾರ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ ಕಾಂಗ್ರೆಸ್ ಹೆಸರನ್ನು ನೇರವಾಗಿ ಉಲ್ಲೇಖಿಸದೆ ವಾಗ್ದಾಳಿ ನಡೆಸಿರುವ ಮೋದಿ, ಮಹಿಳೆಯರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಅವಕಾಶಕ್ಕೆ ಪ್ರತಿಪಕ್ಷ ಅಡ್ಡಿಪಡಿಸಿದೆ. ಇದು ಸಂವಿಧಾನದ ಮೌಲ್ಯಗಳಿಗೆ ತೋರಿದ ಅಗೌರವ ಎಂದು ಟೀಕಿಸಿದ್ದಾರೆ.
ಪ್ರಮುಖ ಪ್ರತಿಪಕ್ಷವು ತನ್ನ ಜವಾಬ್ದಾರಿಯನ್ನು ನಿರ್ವಹಿಸುವ ಬದಲು ಪ್ರಜಾಪ್ರಭುತ್ವದ ಪ್ರಕ್ರಿಯೆಗಳಿಗೆ ಅಡ್ಡಿಪಡಿಸುವ ಪಕ್ಷವಾಗಿ ಬದಲಾಗಿದೆ. ಇಂತಹ ವರ್ತನೆ ಸಂವಿಧಾನಾತ್ಮಕ ಜವಾಬ್ದಾರಿಯ ನಿರ್ವಹಣೆಯಲ್ಲ ಎಂದು ಆರೋಪಿಸಿದ್ದಾರೆ.
ದೇಶದ ಮಹಿಳೆಯರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನ ಮುಂದುವರಿಯಲಿದೆ ಎಂದೂ ಮೋದಿ ಭರವಸೆ ನೀಡಿದ್ದಾರೆ.