ಲಕ್ನೋ, ನ. 26: ಸಂವಿಧಾನ ರಕ್ಷಣಾ ಸಮ್ಮೇಳನದ ಅಂಗವಾಗಿ ಆಯೋಜಿಸಿರುವ ಮೆರವಣಿಗೆಗೆ ಅನುಮತಿ ನಿರಾಕರಿಸಿದ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಬಂಧನಕ್ಕೊಳಗಾಗಬೇಕಾದ ಪರಿಸ್ಥಿತಿ ಎದುರಾದರೂ ಮೆರವಣಿಗೆ ನಡೆಸುವುದಾಗಿ ಸ್ಪಷ್ಟಪಡಿಸಿದೆ.
ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲಕ್ನೋಗೆ ಆಗಮಿಸಲಿದ್ದಾರೆ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್ ತಿಳಿಸಿದ್ದಾರೆ.
ಲಕ್ನೋಗೆ ಆಗಮಿಸಿದ ಬಳಿಕ ಖರ್ಗೆ ಅವರು ಅಂಬೇಡ್ಕರ್ ಮಹಾಸಭಾ ಆವರಣಕ್ಕೆ ಭೇಟಿ ನೀಡಿ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲಿದ್ದಾರೆ. ಬಳಿಕ ಪಕ್ಷದ ಕಚೇರಿಯಲ್ಲಿ ನಡೆಯಲಿರುವ ಸಂವಿಧಾನ ರಕ್ಷಣಾ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಆಡಳಿತ ವಿಧಿಸಿದ್ದ ಎಲ್ಲ ಷರತ್ತುಗಳನ್ನು ಪಾಲಿಸಲು ಸಿದ್ಧರಿದ್ದರೂ ಮೆರವಣಿಗೆಗೆ ಅನುಮತಿ ನಿರಾಕರಿಸಲಾಗಿದೆ ಎಂದು ಗೌತಮ್ ಆರೋಪಿಸಿದರು.
ಸಮ್ಮೇಳನ ಮುಗಿದ ಬಳಿಕ ಖರ್ಗೆ ಅವರು ಹೊಸದಿಲ್ಲಿಗೆ ತೆರಳಲಿದ್ದಾರೆ. ಪಕ್ಷದ ಇತರ ನಾಯಕರು ಮೆರವಣಿಗೆ ಮುಂದುವರಿಸಲಿದ್ದು, ಹಜರತ್ಗಂಜ್ನಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆ ಅಂತ್ಯಗೊಳಿಸಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿಗೊಂದು, ಕಾಂಗ್ರೆಸ್ಗೊಂದು ನೀತಿಯೇ?
ಖರ್ಗೆ ಅವರು ಗೌರವಾನ್ವಿತ ಸಂಸದರಾಗಿದ್ದಾರೆ. ಅವರ ನೇತೃತ್ವದಲ್ಲಿ ನಡೆಯಬೇಕಿದ್ದ ಮೆರವಣಿಗೆಗೆ ಅನುಮತಿ ನಿರಾಕರಿಸಿರುವುದು ರಾಜ್ಯ ಸರ್ಕಾರದ ಧೋರಣೆಯನ್ನು ತೋರಿಸುತ್ತದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ಇತ್ತೀಚೆಗೆ ಲಕ್ನೋದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿತ್ತು. ಆದರೆ ಕಾಂಗ್ರೆಸ್ಗೆ ಅನುಮತಿ ನಿರಾಕರಿಸಿರುವುದೇಕೆ ಎಂದು ಗೌತಮ್ ಪ್ರಶ್ನಿಸಿದರು.