ಬೆಂಗಳೂರು, ನ. 26: ಸರ್ಕಾರಿ ಶಾಲೆಗಳನ್ನು ನಡೆಸಬೇಕಿರುವುದು ಸರ್ಕಾರವೇ ಹೊರತು ಅಂಬಾನಿ, ಅದಾನಿ ಅಥವಾ ಟೊಯೋಟಾ ಕಂಪನಿಗಳಲ್ಲ. ಶಾಲೆಗಳನ್ನು ಖಾಸಗಿಯವರಿಗೆ ದತ್ತು ನೀಡಲು ಜನರು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿಲ್ಲ ಎಂದು ಸಾಮಾಜಿಕ ಚಿಂತಕ ಶ್ರೀಪಾದ ಭಟ್ ವಾಗ್ದಾಳಿ ನಡೆಸಿದರು.
ಶಿಕ್ಷಣ ಹಕ್ಕು ಕಾಯ್ದೆಯ ಸಮಗ್ರ ಅನುಷ್ಠಾನ ಹಾಗೂ ಸರ್ಕಾರಿ ಶಾಲೆಗಳ ದತ್ತು ನೀತಿ ರದ್ದತಿಗೆ ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ನಡೆದ ಅಹೋರಾತ್ರಿ ಧರಣಿಯಲ್ಲಿ ಅವರು ಮಾತನಾಡಿದರು.
ರಾಜ್ಯದ 41 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ 38 ಲಕ್ಷ ಮಕ್ಕಳ ಭವಿಷ್ಯಕ್ಕಾಗಿ ಈ ಹೋರಾಟ ನಡೆಯುತ್ತಿದೆ. ನೂರಾರು ಕಿಲೋಮೀಟರ್ ದೂರದಿಂದ ಆಗಮಿಸಿ ಧರಣಿ ನಡೆಸುತ್ತಿರುವ ತಾಯಂದಿರ ತ್ಯಾಗವನ್ನು ಅರ್ಥಮಾಡಿಕೊಂಡು ಪೋಷಕರು ಬೆಂಬಲ ನೀಡಬೇಕು ಎಂದರು.
ಮಹಿಳೆಯರು, ದಲಿತರು, ಮುಸ್ಲಿಮರು ಹಾಗೂ ಹಿಂದುಳಿದ ವರ್ಗಗಳ ಬೆಂಬಲದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂಬ ನಿರೀಕ್ಷೆಯಿಂದ ಮತ ನೀಡಿದ ಜನರನ್ನೇ ಸರ್ಕಾರ ಇಂದು ಬೀದಿಗೆ ತಂದು ನಿಲ್ಲಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವರು, ಅಧಿಕಾರಿಗಳ ವಿರುದ್ಧ ಆಕ್ರೋಶ
ಕೊಪ್ಪಳದಲ್ಲಿ ಶಾಲೆಗಳ ಸಮಸ್ಯೆಗಳನ್ನು ಗಮನಕ್ಕೆ ತರಲು ಮುಂದಾದ ಶಾಲಾಭಿವೃದ್ಧಿ ಸಮಿತಿ ಸದಸ್ಯರ ಮೇಲೆ ಶಿಕ್ಷಣ ಸಚಿವರು ಕೂಗಾಡಿರುವುದು ಖಂಡನೀಯ. ಜನರ ಸಮಸ್ಯೆಗಳನ್ನು ಆಲಿಸುವ ಕನಿಷ್ಠ ಸೌಜನ್ಯವನ್ನಾದರೂ ಸಚಿವರು ಹೊಂದಿರಬೇಕು ಎಂದರು.
ಶಿಕ್ಷಕರ ಕೊರತೆ, ಶೌಚಾಲಯಗಳ ಅಭಾವ ಹಾಗೂ ಮೂಲಸೌಕರ್ಯಗಳ ಸಮಸ್ಯೆಗಳನ್ನು ಪರಿಹರಿಸುವ ಬದಲು ಅಧಿಕಾರಿಗಳು ಅಂಕಿಅಂಶ ಮತ್ತು ದಾಖಲೆಗಳನ್ನು ಮುಂದಿಟ್ಟು ವಾಸ್ತವ ಸ್ಥಿತಿಯನ್ನು ಮರೆಮಾಚುತ್ತಿದ್ದಾರೆ ಎಂದು ಆರೋಪಿಸಿದರು.
ಶಿಕ್ಷಕರ ನೇಮಕಾತಿ, ಪಠ್ಯಪುಸ್ತಕ ವಿತರಣೆ ಸೇರಿದಂತೆ ಎಲ್ಲ ಮೂಲಭೂತ ಅಗತ್ಯಗಳನ್ನು ಖಚಿತಪಡಿಸುವ ಶಿಕ್ಷಣ ಹಕ್ಕು ಕಾಯ್ದೆಯನ್ನು ಸಮಗ್ರವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಊರಿನ ಅಸ್ಮಿತೆಗೆ ಧಕ್ಕೆ
ಟೊಯೋಟಾ ಕಂಪನಿ ಹಣ ನೀಡಿದರೆ ಸರ್ಕಾರಿ ಶಾಲೆಗೆ ಆ ಕಂಪನಿಯ ಹೆಸರಿಡುವುದಾಗಿ ಮುಖ್ಯಮಂತ್ರಿ ನೀಡಿರುವ ಹೇಳಿಕೆಯನ್ನು ಶ್ರೀಪಾದ ಭಟ್ ಖಂಡಿಸಿದರು.
ಸರ್ಕಾರಿ ಶಾಲೆಗಳು ಆಯಾ ಊರಿನ ಅಸ್ಮಿತೆಯ ಭಾಗವಾಗಿವೆ. ದತ್ತು ನೀತಿ ಮುಂದುವರಿದರೆ ಮುಂದಿನ ತಲೆಮಾರಿನ ಮಕ್ಕಳು ತಮ್ಮ ಊರಿನ ಶಾಲೆಯ ಬದಲು ಅದಾನಿ, ಅಂಬಾನಿ, ಟೊಯೋಟಾ ಅಥವಾ ಜಿಂದಾಲ್ ಹೆಸರಿನ ಶಾಲೆಗಳಲ್ಲಿ ಓದಿದ್ದಾಗಿ ಹೇಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.
ಶಾಲೆಗಳಿಗೆ ಅಗತ್ಯ ವಸ್ತುಗಳನ್ನು ದೇಣಿಗೆಯಾಗಿ ನೀಡುವುದಕ್ಕೂ ಶಾಲೆಯ ಆಡಳಿತವನ್ನೇ ಖಾಸಗಿಯವರಿಗೆ ವಹಿಸುವುದಕ್ಕೂ ವ್ಯತ್ಯಾಸವಿದೆ. ದತ್ತು ಪ್ರಕ್ರಿಯೆ 25 ವರ್ಷಗಳಿಂದ ನಡೆಯುತ್ತಿದೆ ಎಂಬ ಕಾರಣಕ್ಕೆ ಅದನ್ನು ಮುಂದುವರಿಸಬೇಕೆಂದೇನಿಲ್ಲ ಎಂದು ಹೇಳಿದರು.
ಸರ್ಕಾರಿ ಶಾಲೆಗಳ ಉಳಿವಿನ ಹೋರಾಟವು ಬಡವರು, ದಲಿತರು ಮತ್ತು ಹಿಂದುಳಿದ ವರ್ಗಗಳ ಮಕ್ಕಳ ಶಿಕ್ಷಣದ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟವಾಗಿದೆ. ಶಿಕ್ಷಣ ಹಕ್ಕು ಕಾಯ್ದೆಯ ಸಮಗ್ರ ಅನುಷ್ಠಾನ ಹಾಗೂ ದತ್ತು ನೀತಿ ರದ್ದತಿ ಬೇಡಿಕೆಗಳು ಈಡೇರುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.