ಹೊಸದಿಲ್ಲಿ, ಅ. 9: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ವಿರುದ್ಧ ಅಕ್ಟೋಬರ್ 10ರಂದು ದೆಹಲಿಯಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಮುನ್ನ ರಾಜಧಾನಿಯಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಿರುವ ಪೊಲೀಸರು, ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡುವಂತೆ ಮಸೀದಿಯ ಧ್ವನಿವರ್ಧಕದ ಮೂಲಕ ಪೋಷಕರಿಗೆ ಮನವಿ ಮಾಡಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ಮಸೀದಿಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ಶನಿವಾರ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಹಳೆ ದೆಲಿಯ ಚಾಂದನಿ ಚೌಕ್ ಪ್ರದೇಶದ ಟೌನ್ ಹಾಲ್ ಸಮೀಪದ ಶಾಹಿ ಮಸೀದಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಈ ಮನವಿ ಮಾಡಿದ್ದಾರೆ.
ಮಸೀದಿಗೆ ಪ್ರಾರ್ಥನೆಗಾಗಿ ಆಗಮಿಸಿದ್ದ ಜನರನ್ನು ಉದ್ದೇಶಿಸಿ ಧ್ವನಿವರ್ಧಕದ ಮೂಲಕ ಮಾತನಾಡಿದ ಅಧಿಕಾರಿ, ನಗರದಲ್ಲಿ ಶಾಂತಿ ಮತ್ತು ಸೌಹಾರ್ದ ಕಾಪಾಡುವಂತೆ ಕೋರಿದ್ದಾರೆ. ಯಾವುದೇ ವದಂತಿಗಳು ಅಥವಾ ಪ್ರಚೋದನಕಾರಿ ಸಂದೇಶಗಳಿಗೆ ಕಿವಿಗೊಡದೆ ಪೊಲೀಸ್ ಇಲಾಖೆ ಮತ್ತು ಆಡಳಿತದೊಂದಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ವಿಶೇಷವಾಗಿ ಪೋಷಕರು ತಮ್ಮ ಮಕ್ಕಳನ್ನು ಪ್ರತಿಭಟನೆಗಳಿಗೆ ಕಳುಹಿಸಬಾರದು. ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಪರಿಚಿತರಿಗೆ ಅನಗತ್ಯವಾಗಿ ಜನಸಂದಣಿಯಲ್ಲಿ ಸೇರದಂತೆ ತಿಳಿಹೇಳಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳಿಂದ ದೂರವಿರಬೇಕು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಮಸೀದಿಯ ಧ್ವನಿವರ್ಧಕದ ಮೂಲಕ ಪೊಲೀಸರು ಸಾರ್ವಜನಿಕರಿಗೆ ಈ ರೀತಿಯ ಮನವಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಶನಿವಾರದ ಪ್ರತಿಭಟನೆಗೆ ಮುನ್ನ ಕೈಗೊಳ್ಳಲಾಗುತ್ತಿರುವ ಭದ್ರತಾ ಕ್ರಮಗಳ ಭಾಗವಾಗಿ ಈ ಬೆಳವಣಿಗೆ ನಡೆದಿದೆ.
ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆಗೆ ಕರೆ
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ಅವರ ಕಾರ್ಯವೈಖರಿಯನ್ನು ವಿರೋಧಿಸಿ ಸಿಜೆಪಿ ಅಕ್ಟೋಬರ್ 10ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕರೆ ನೀಡಿದೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಜಧಾನಿಯ ವಿವಿಧೆಡೆ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಸಾರ್ವಜನಿಕ ಸಂಚಾರಕ್ಕೂ ನಿರ್ಬಂಧಗಳನ್ನು ವಿಧಿಸಲಾಗಿದೆ.
ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಪೊಲೀಸರು ವಿಧಿಸಿರುವ ನಿರ್ಬಂಧಗಳು ಸುಪ್ರೀಂ ಕೋರ್ಟ ಮೆಟ್ಟಿಲೇರಿವೆ. ಮೆಟ್ರೋ ನಿಲ್ದಾಣಗಳನ್ನು ಮುಚ್ಚಿರುವುದು, ರೈಲು ಸಂಚಾರ ರದ್ದುಗೊಳಿಸಿರುವುದು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿರುವ ಕ್ರಮಗಳ ವಿರುದ್ಧ ನ್ಯಾಯಾಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.
ಈ ಕುರಿತು ಶುಕ್ರವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ, ಪ್ರತಿಭಟನೆಯನ್ನು ನಿಯಂತ್ರಿಸುವ ನೆಪದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಸಂಪೂರ್ಣ ಸ್ಥಗಿತಗೊಳಿಸುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
ಪ್ರತಿಭಟಿಸುವ ಹಕ್ಕಿನ ಜತೆಗೆ ಸಾಮಾನ್ಯ ನಾಗರಿಕರ ಸಂಚಾರ ಮತ್ತು ಮೂಲಭೂತ ಸೌಲಭ್ಯಗಳನ್ನು ಪಡೆಯುವ ಹಕ್ಕನ್ನೂ ರಕ್ಷಿಸಬೇಕು. ಭದ್ರತಾ ಕ್ರಮಗಳು ಸಾರ್ವಜನಿಕರಿಗೆ ಅನಗತ್ಯ ತೊಂದರೆ ಉಂಟುಮಾಡಬಾರದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನಿರ್ಬಂಧಗಳಿಗೆ ಸಂಬಂಧಿಸಿದಂತೆ ಪೊಲೀಸರು ಹೊರಡಿಸಿರುವ ನೈಜ ಆದೇಶವನ್ನು ಸಲ್ಲಿಸುವಂತೆಯೂ ಸೂಚಿಸಿದೆ.
ಇದರ ನಡುವೆಯೇ ದೆಹಲಿ ಪೊಲೀಸರು ಮಸೀದಿಗಳ ಮೂಲಕ ಸಾರ್ವಜನಿಕರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡುತ್ತಿರುವುದು ಗಮನ ಸೆಳೆದಿದೆ. ಪ್ರತಿಭಟನೆಗೆ ಒಂದು ದಿನ ಬಾಕಿ ಇರುವಾಗ ರಾಜಧಾನಿಯಲ್ಲಿ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.