ಬೆಳಗಾವಿ, ನ. 5: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಹಾಗೂ ಪ್ರತಿ ಟನ್‌ಗೆ ಸರ್ಕಾರದಿಂದ ಹೆಚ್ಚುವರಿಯಾಗಿ ₹1,000 ಪ್ರೋತ್ಸಾಹಧನ ನೀಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ಗುರುವಾರ ತೀವ್ರ ಸ್ವರೂಪ ಪಡೆದುಕೊಂಡಿತು. ಬೆಳಗಾವಿಯಲ್ಲಿ ನಿಷೇಧಾಜ್ಞೆ ಧಿಕ್ಕರಿಸಿ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ರೈತರನ್ನು ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದರು. ಮತ್ತೊಂದೆಡೆ ಜಿಲ್ಲೆಯ ವಿವಿಧೆಡೆ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳನ್ನು ತಡೆದು, ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ಮುಕ್ತಿಮಠದಿಂದ ರಾಣಿ ಚನ್ನಮ್ಮ ವೃತ್ತದವರೆಗೆ ಪಾದಯಾತ್ರೆ ನಡೆಸಲು ರೈತರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪಾದಯಾತ್ರೆಗೆ ಅವಕಾಶವಿಲ್ಲ ಎಂದು ಪೊಲೀಸರು ತಡೆದರು. ರೈತ ಮುಖಂಡ ಚೂನಪ್ಪ ಪೂಜೇರಿ ಸೇರಿದಂತೆ ನೂರಾರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಇದರಿಂದ ರೈತರ ಆಕ್ರೋಶ ಮತ್ತಷ್ಟು ಹೆಚ್ಚಾಯಿತು.
ಚನ್ನಮ್ಮ ವೃತ್ತದಲ್ಲಿ ಎರಡು ಗಂಟೆ ಜಟಾಪಟಿ: ಚೂನಪ್ಪ ಪೂಜೇರಿ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ರೈತರ ಗುಂಪೊಂದು ನಿಷೇಧಾಜ್ಞೆ ಧಿಕ್ಕರಿಸಿ ರಾಣಿ ಚನ್ನಮ್ಮ ವೃತ್ತಕ್ಕೆ ನುಗ್ಗಿತು. ಮುಖಂಡರನ್ನು ಬಿಡುಗಡೆ ಮಾಡುವವರೆಗೆ ವಾಹನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿತು.
ಇದೇ ವೇಳೆ ವಶಕ್ಕೆ ಪಡೆದ ರೈತರನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನ ವೃತ್ತಕ್ಕೆ ಆಗಮಿಸಿತು. ಅದನ್ನು ತಡೆದ ಪ್ರತಿಭಟನಾಕಾರರು ವಾಹನದಲ್ಲಿದ್ದ ರೈತರನ್ನು ಕೆಳಗಿಳಿಸುವಂತೆ ಒತ್ತಾಯಿಸಿದರು. ಪೊಲೀಸ್ ವಾಹನಕ್ಕೆ ಬಡಿದು ಚಾಲಕನನ್ನು ಕೆಳಗಿಳಿಸಿದ ಪ್ರತಿಭಟನಾಕಾರರು, ಅಲ್ಲಿದ್ದ ಪೊಲೀಸರನ್ನು ಹಿಂದೆ ಸರಿಸಿ ವಾಹನದಲ್ಲಿದ್ದ ರೈತರನ್ನು ಕೆಳಗಿಳಿಸಿದರು.
ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರು ನಾಲ್ಕು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದರು. ಪ್ರತಿಭಟನಾಕಾರರನ್ನು ಒಬ್ಬೊಬ್ಬರಾಗಿ ಎಳೆದು, ಕೆಲವರನ್ನು ಹೊತ್ತು ಪೊಲೀಸ್ ವಾಹನಗಳಿಗೆ ಹತ್ತಿಸಿದರು. ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ತೀವ್ರ ನೂಕಾಟ, ತಳ್ಳಾಟ ಹಾಗೂ ವಾಗ್ವಾದ ನಡೆಯಿತು.
ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆಲವು ರೈತರು ವೃತ್ತದ ಸುತ್ತ ಓಡಾಡಿದರೆ, ಪೊಲೀಸರು ಅವರನ್ನು ಬೆನ್ನಟ್ಟಿ ವಶಕ್ಕೆ ಪಡೆದರು. ನಾಲ್ಕು ಪೊಲೀಸ್ ವಾಹನಗಳು ಸಾಲದಾದಾಗ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ತರಿಸಿ ಪ್ರತಿಭಟನಾಕಾರರನ್ನು ಕರೆದೊಯ್ಯಲಾಯಿತು.
ಸುಮಾರು ಎರಡು ಗಂಟೆಗಳ ಕಾಲ ಚನ್ನಮ್ಮ ವೃತ್ತದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿ ಸಾರ್ವಜನಿಕರು ಪರದಾಡಿದರು.
ಹೋರಾಟ ನಿಲ್ಲುವುದಿಲ್ಲ: ಪೊಲೀಸ್ ವಶದಲ್ಲಿದ್ದ ರೈತ ಮುಖಂಡ ಚೂನಪ್ಪ ಪೂಜೇರಿ, ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಬದಲು ಸರ್ಕಾರ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
‘ಪ್ರತಿ ಟನ್ ಕಬ್ಬಿಗೆ ₹1,000 ಹೆಚ್ಚುವರಿ ಪ್ರೋತ್ಸಾಹಧನ ಘೋಷಿಸಬೇಕು. ಮುಖಂಡರನ್ನು ವಶಕ್ಕೆ ಪಡೆದ ಮಾತ್ರಕ್ಕೆ ಹೋರಾಟ ನಿಲ್ಲುವುದಿಲ್ಲ. ಜಿಲ್ಲೆಯಾದ್ಯಂತ ರೈತರು ರಸ್ತೆ ತಡೆ ನಡೆಸಿ ಪ್ರತಿಭಟನೆ ಮುಂದುವರಿಸಬೇಕು’ ಎಂದು ಕರೆ ನೀಡಿದರು.
ಮೂಡಲಗಿಯಲ್ಲಿ ಶಶಿಕಾಂತ ಗುರೂಜಿ ವಶಕ್ಕೆ: ಗುರ್ಲಾಪುರದಿಂದ ಬೆಳಗಾವಿಗೆ ಆಗಮಿಸುತ್ತಿದ್ದ ರೈತ ಸಂಘದ ಗೌರವ ಅಧ್ಯಕ್ಷ ಶಶಿಕಾಂತ ಗುರೂಜಿ ಅವರನ್ನು ಮೂಡಲಗಿ ತಾಲ್ಲೂಕಿನಲ್ಲಿ ಪೊಲೀಸರು ವಶಕ್ಕೆ ಪಡೆದರು.
ಪೊಲೀಸ್ ವಶದಲ್ಲಿದ್ದಾಗಲೇ ವಿಡಿಯೊ ಸಂದೇಶ ನೀಡಿದ ಅವರು, ಬೆಳಗಾವಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ರೈತರು ಸದ್ಯಕ್ಕೆ ನಗರದತ್ತ ತೆರಳಬಾರದು. ಅನಗತ್ಯ ಗೊಂದಲಕ್ಕೆ ಅವಕಾಶ ನೀಡದೆ ಶಾಂತಿಯುತವಾಗಿರಬೇಕು. ಮುಂದಿನ ಹೋರಾಟದ ರೂಪುರೇಷೆಯನ್ನು ಚರ್ಚಿಸಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಕಾಗವಾಡ ತಾಲ್ಲೂಕಿನಲ್ಲಿ ಹೆದ್ದಾರಿ ಬಂದ್: ರೈತ ಮುಖಂಡರನ್ನು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಕಾಗವಾಡ ತಾಲ್ಲೂಕಿನ ಐನಾಪುರ, ಉಗಾರ, ಕಾಗವಾಡ ಹಾಗೂ ಕವಲಗುಡ್ಡ ಗ್ರಾಮಗಳ ಬಳಿ ರೈತರು ಪ್ರತಿಭಟನೆ ನಡೆಸಿದರು. ಜೇವರ್ಗಿ–ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಟೈರ್‌ಗಳಿಗೆ ಬೆಂಕಿ ಹಚ್ಚಿದರು.
ರೈತ ಮುಖಂಡ ಗಿರಿಮಲ್ಲಪ್ಪ ಅಥಣಿ ಮಾತನಾಡಿ, ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಡುತ್ತಿರುವ ರೈತರನ್ನು ವಶಕ್ಕೆ ಪಡೆಯುವ ಮೂಲಕ ಸರ್ಕಾರ ಚಳವಳಿಯನ್ನು ಹತ್ತಿಕ್ಕಲು ಮುಂದಾಗಿದೆ. ಕಬ್ಬಿಗೆ ಸೂಕ್ತ ಬೆಲೆ ಘೋಷಿಸುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು.
ಪ್ರತಿಭಟನೆಯಿಂದ ಮಹಾರಾಷ್ಟ್ರದ ಮಿರಜ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತವು. ಪ್ರಯಾಣಿಕರು, ಸರಕು ಸಾಗಣೆ ವಾಹನಗಳ ಚಾಲಕರು ಹಾಗೂ ಶಾಲಾ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು.
ಪೊಲೀಸ್ ವಾಹನಕ್ಕೆ ಬೇಲಿ ಹಾಕಿ ಅಡ್ಡಿ: ಕರಗುಪ್ಪಿ–ಪಾಶ್ಚಾಪುರ ರಸ್ತೆಯಲ್ಲಿ ರೈತರು ಪ್ರತಿಭಟನೆ ನಡೆಸಿ, ವಶಕ್ಕೆ ಪಡೆದ ಪ್ರತಿಭಟನಾಕಾರರನ್ನು ಕರೆದೊಯ್ಯುತ್ತಿದ್ದ ಮೀಸಲು ಪೊಲೀಸ್ ಪಡೆ ವಾಹನಕ್ಕೆ ಅಡ್ಡಲಾಗಿ ಬೇಲಿ ಹಾಕಿ ತಡೆದರು.
ಪ್ರತಿಭಟನಾಕಾರರನ್ನು ಗೋಕಾಕ ಗುಡ್ಡದ ಕಡೆಗೆ ಕರೆದೊಯ್ಯುವಾಗ ಕುಡಿಯಲು ನೀರು ನೀಡದೆ ಸತಾಯಿಸಲಾಗುತ್ತಿದೆ ಎಂದು ರೈತರು ಆರೋಪಿಸಿದರು.
ಈ ನಡುವೆ ಪೊಲೀಸ್ ವಾಹನದಲ್ಲಿ ಕರೆದೊಯ್ಯುತ್ತಿದ್ದ ರೈತರೊಬ್ಬರು ಎದೆನೋವಿನಿಂದ ಅಸ್ವಸ್ಥಗೊಂಡ ಘಟನೆ ವರದಿಯಾಗಿದೆ. ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಆ ರೈತನನ್ನು ಆಸ್ಪತ್ರೆಗೆ ದಾಖಲಿಸುವ ಬದಲು ಹುಕ್ಕೇರಿ ತಾಲ್ಲೂಕಿನ ಬಸಾಪುರ ಸಮೀಪ ಇಳಿಸಿ ಪೊಲೀಸರು ತೆರಳಿದ್ದಾರೆ ಎಂದು ರೈತರು ಗಂಭೀರ ಆರೋಪ ಮಾಡಿದ್ದಾರೆ.
ಅಸ್ವಸ್ಥ ರೈತನನ್ನು ಇತರ ರೈತರು ಬಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಪೊಲೀಸರ ವರ್ತನೆಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮುನವಳ್ಳಿ, ಯರಗಟ್ಟಿಯಲ್ಲಿ ಟೈರ್‌ಗೆ ಬೆಂಕಿ: ಚೂನಪ್ಪ ಪೂಜೇರಿ ಅವರನ್ನು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಸವದತ್ತಿ ತಾಲ್ಲೂಕಿನ ಮುನವಳ್ಳಿಯಲ್ಲಿ ರೈತರು ಗೋಕಾಕ–ಸವದತ್ತಿ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು. ರಸ್ತೆಯ ಮಧ್ಯೆ ಟೈರ್‌ಗಳಿಗೆ ಬೆಂಕಿ ಹಚ್ಚಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಯರಗಟ್ಟಿ ಪಟ್ಟಣದಲ್ಲಿಯೂ ರೈತರು ಬೆಳಗಾವಿ–ಬಾಗಲಕೋಟೆ ಸಂಪರ್ಕಿಸುವ ಪ್ರಮುಖ ರಸ್ತೆಯನ್ನು ಬಂದ್ ಮಾಡಿದರು. ಟೈರ್‌ಗಳಿಗೆ ಬೆಂಕಿ ಹಚ್ಚಿ ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿದರು.
₹3,600 ದರಕ್ಕೆ ರೈತರಲ್ಲಿ ಭಿನ್ನಾಭಿಪ್ರಾಯ: ಬುಧವಾರ ರಾತ್ರಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ನಡೆಸಿದ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ₹3,600 ದರ ನೀಡಲು ಕಾರ್ಖಾನೆ ಮಾಲೀಕರು ಸಮ್ಮತಿಸಿದ್ದಾರೆ ಎಂದು ತಿಳಿಸಿದ್ದರು.
ಈ ದರವನ್ನು ಒಪ್ಪಿಕೊಂಡು ಕಬ್ಬು ಕಟಾವು ಹಾಗೂ ನುರಿಸುವ ಕಾರ್ಯ ಆರಂಭಿಸಲು ರೈತರು ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದ್ದರು.
ಕಿತ್ತೂರು, ಬೈಲಹೊಂಗಲ ಹಾಗೂ ಖಾನಾಪುರ ಭಾಗದ ಕೆಲವು ರೈತ ಮುಖಂಡರು ಈ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿದ್ದಾರೆ. ಕಬ್ಬು ಕಟಾವಿಗೆ ಬಂದಿರುವುದರಿಂದ ವಿಳಂಬವಾದರೆ ತೂಕ ಹಾಗೂ ಇಳುವರಿ ಕಡಿಮೆಯಾಗಿ ರೈತರಿಗೆ ನಷ್ಟವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ, ರೈತ ಮುಖಂಡ ರವಿ ಪಾಟೀಲ ನೇತೃತ್ವದ ಬಣ ₹3,600 ದರವನ್ನು ವಿರೋಧಿಸಿದೆ. ಕಳೆದ ಒಂದು ತಿಂಗಳಿಂದ ಇದೇ ದರದ ಪ್ರಸ್ತಾಪ ಮಾಡಲಾಗುತ್ತಿದ್ದು, ಗೊಬ್ಬರ, ಕಟಾವು ಕೂಲಿ ಹಾಗೂ ಸಾಗಣೆ ವೆಚ್ಚ ಹೆಚ್ಚಿರುವುದರಿಂದ ಈ ದರ ರೈತರಿಗೆ ಲಾಭದಾಯಕವಲ್ಲ ಎಂದು ವಾದಿಸಿದೆ.
ಕಬ್ಬಿನ ಬೆಲೆ ವಿಚಾರದಲ್ಲಿ ರೈತ ಸಂಘಟನೆಗಳ ನಡುವೆ ಭಿನ್ನಾಭಿಪ್ರಾಯ ಮುಂದುವರಿದಿರುವ ನಡುವೆಯೇ ಮುಖಂಡರನ್ನು ವಶಕ್ಕೆ ಪಡೆದಿರುವುದು ಹೋರಾಟ ಮತ್ತಷ್ಟು ತೀವ್ರಗೊಳ್ಳಲು ಕಾರಣವಾಗಿದೆ. ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ರೈತ ಸಂಘಟನೆಗಳು ಎಚ್ಚರಿಸಿವೆ.