ಸುಬ್ರಹ್ಮಣ್ಯ, ನ. 5: ಕುಮಾರಧಾರಾ ಸೇತುವೆ ಬಳಿ ನದಿಗೆ ಇಳಿದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬರಿಗೆ ಮೊಸಳೆ ಕಚ್ಚಿ ಗಾಯಗೊಳಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಮಹಿಳೆಯ ಕಿರುಚಾಟ ಕೇಳಿದ ಸ್ಥಳೀಯರು ಪೊಲೀಸರ ನೆರವಿನಿಂದ ಆಕೆಯನ್ನು ರಕ್ಷಿಸಿದ್ದಾರೆ.
ಉಡುಪಿ ಜಿಲ್ಲೆಯ ಮಹಿಳೆಯೊಬ್ಬರು ವೈಯಕ್ತಿಕ ಕಾರಣಗಳಿಂದ ಮನನೊಂದು ಬುಧವಾರ ರಾತ್ರಿ ಕುಮಾರಧಾರಾ ಸೇತುವೆ ಸಮೀಪ ನದಿಗೆ ಇಳಿದಿದ್ದರು. ಈ ವೇಳೆ ಮೊಸಳೆಯೊಂದು ಆಕೆಗೆ ಕಚ್ಚಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.
ಮೊಸಳೆ ದಾಳಿಯಿಂದ ಗಾಬರಿಗೊಂಡ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾರೆ. ಸಮೀಪದ ವಸತಿಗೃಹದ ಕಾರ್ಮಿಕರು ಕೂಗಾಟ ಕೇಳಿ ತಕ್ಷಣ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಮಹಿಳೆಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಬಳಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಕುಟುಂಬದವರೊಂದಿಗೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.